ಮನೆ ಮನರಂಜನೆ ಜು.28ಕ್ಕೆ “ಆಚಾರ್‌-ಕೋ’ ಚಿತ್ರ ಬಿಡುಗಡೆ

ಜು.28ಕ್ಕೆ “ಆಚಾರ್‌-ಕೋ’ ಚಿತ್ರ ಬಿಡುಗಡೆ

0

ಪಿಆರ್‌ ಕೆ ಪ್ರೊಡಕ್ಷನ್‌ ನಡಿ “ಆಚಾರ್‌-ಕೋ’ ಎಂಬ ಚಿತ್ರ ಆರಂಭವಾಗಿದ್ದು, ಜು.28ಕ್ಕೆ ತೆರೆಗೆ ಬರುತ್ತಿದೆ.

Join Our Whatsapp Group

ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭ ನಡೆಯಿತು. ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗಿದೆ. ಅಶ್ವಿ‌ನಿ ಪುನೀತ್‌ ರಾಜಕುಮಾರ್‌ ಚಿತ್ರವನ್ನು ನಿರ್ಮಿಸಿದ್ದಾರೆ.

 “ಇದು ಅರವತ್ತರ ಕಾಲಘಟ್ಟದಲ್ಲಿ ನಡೆಯುವ ಕಥೆ. ಬೆಂಗಳೂರಿನ ಜಯನಗರ ನಿವಾಸಿ ಮಧುಸೂದನ್‌ ಆಚಾರ್‌ – ಸಾವಿತ್ರಿ ಆಚಾರ್‌ ಹಾಗೂ ಅವರ ಹತ್ತು ಜನ ಮಕ್ಕಳ ಸುತ್ತ ಕಥೆ ನಡೆಯುತ್ತದೆ. ಒಟ್ಟಿನಲ್ಲಿ ಇದೊಂದು ಕೂಡು ಕುಟುಂಬದ ಕಥೆ ಎನ್ನಬಹುದು. ಮಧುಸೂದನ್‌ ಆಚಾರ್‌ ಪಾತ್ರದಲ್ಲಿ ಹಿರಿಯ ನಟ ಅಶೋಕ್‌, ಸಾವಿತ್ರಿ ಆಚಾರ್‌ ಪಾತ್ರದಲ್ಲಿ ಸುಧಾ ಬೆಳವಾಡಿ ಅಭಿನಯಿಸಿದ್ದಾರೆ. ಹೆಚ್ಚು ಜನ ಕಲಾವಿದರನ್ನು ಆಡಿಷನ್‌ ಮೂಲಕ ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಬಹುತೇಕರು ರಂಗಭೂಮಿ ಹಿನ್ನೆಲೆಯುಳ್ಳವರು. ನಾನು ಕೂಡ ಇದರಲ್ಲಿ ಅಭಿನಯಿಸಿದ್ದೇನೆ. ಅರವತ್ತರ ದಶಕದಲ್ಲಿ ನಡೆಯುವ ಕಥೆಯಾಗಿರುವುದರಿಂದ ಚಿತ್ರದಲ್ಲಿ ಸ್ವಲ್ಪ ಕೂಡ ಅಧುನೀಕತೆ ಕಾಣಬಾರದು. ಹಾಗಾಗಿ ಮೈಸೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈ ಚಿತ್ರದ ಬಗ್ಗೆ ಪುನೀತ್‌ ರಾಜಕುಮಾರ್‌ ಅವರ ಬಳಿ ಮಾತನಾಡಿದ್ದೆ. ಇಂದು ಅವರಿದಿದ್ದರೆ ಬಹಳ ಖುಷಿ ಪಡುತ್ತಿದ್ದರು. ಅಶ್ವಿ‌ನಿ ಪುನೀತ್‌ ರಾಜಕುಮಾರ್‌ ಅವರು ಯಾವುದೇ ಕೊರತೆ ಬರದಂತೆ ಅಚ್ಚುಕಟ್ಟಾಗಿ ನಿರ್ಮಾಣ ಮಾಡಿದ್ದಾರೆ. ನಮ್ಮ ಚಿತ್ರದ ಬಹುತೇಕ ತಂತ್ರಜ್ಞರು ಮಹಿಳೆಯರೇ ಆಗಿರುವುದು ವಿಶೇಷ. ಜುಲೈ 28 ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದು ವಿವರ ನೀಡಿದರು ಸಿಂಧು.

 “ನಾನು ಸಿನಿಮಾ ನೋಡಿದ್ದೇನೆ. ಚೆನ್ನಾಗಿದೆ. ಸಿಂಧು ಶ್ರೀನಿವಾಸಮೂರ್ತಿ ಮತ್ತು ತಂಡಕ್ಕೆ ಶುಭವಾಗಲಿ’ ಎಂದರು ಅಶ್ವಿ‌ನಿ ಪುನೀತ್‌ ರಾಜಕುಮಾರ್‌.

ಹಿರಿಯ ನಟ ಅಶೋಕ್‌, ಸುಧಾ ಬೆಳವಾಡಿ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು, ಛಾಯಾಗ್ರಾಹಕ ಅಭಿಮನ್ಯು ಸದಾನಂದನ್‌ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಬಿಂದು ಮಾಲಿನಿ ಸಂಗೀತ, ವಿಶ್ವಾಸ್‌ ಕಶ್ಯಪ್‌ ಕಲಾ ನಿರ್ದೇಶನ ಹಾಗೂ ಆಶಿಕ್‌ ಕುಸುಗೊಳ್ಳಿ ಅವರ ಸಂಕಲನವಿರುವ ಈ ಚಿತ್ರಕ್ಕೆ ಸಿಂಧು ಶ್ರೀನಿವಾಸಮೂರ್ತಿ ಹಾಗೂ ಕಣ್ಣನ್‌ ಗಿಲ್‌ ಕಥೆ, ಚಿತ್ರಕಥೆ ರಚಿಸಿದ್ದಾರೆ. ಸಂಭಾಷಣೆಯನ್ನು ತ್ರಿಲೋಕ್‌ ತ್ರಿವಿಕ್ರಮ ಬರೆದಿದ್ದಾರೆ.