ಮನೆ ರಾಜ್ಯ ಹಡಪದ ಅಪ್ಪಣ್ಣ ಅವರ ಬದುಕು ಮತ್ತು ವಚನಗಳು ಇಂದಿಗೂ ಆದರ್ಶ: ಶಿವಕುಮಾರ್

ಹಡಪದ ಅಪ್ಪಣ್ಣ ಅವರ ಬದುಕು ಮತ್ತು ವಚನಗಳು ಇಂದಿಗೂ ಆದರ್ಶ: ಶಿವಕುಮಾರ್

0

ಮೈಸೂರು: ಬಸವಣ್ಣನವರಿಗೆ ಪ್ರೀತಿ ಪಾತ್ರರಾಗಿ ಜೀವನದುದ್ದಕ್ಕೂ ಜೊತೆಯಾಗಿ ಸ್ನೇಹಿತ ಹಾಗೂ ಮಾರ್ಗದರ್ಶಕನಂತಿದ್ದ ನಿಜಯೋಗಿ, ಶಿವಶರಣ ಶ್ರೀ ಹಡಪದ ಅಪ್ಪಣ್ಣ ಅವರ ಬದುಕು ಮತ್ತು ವಚನಗಳು ಇಂದಿಗೂ ಆದರ್ಶ ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್ ರವರು ತಿಳಿಸಿದರು.

Join Our Whatsapp Group

ಮೈಸೂರು ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಸಮಿತಿ ಸಹಯೋಗದೊಂದಿಗೆ ನಗರದ ಕಿರು ರಂಗಮOದಿರದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಪ್ಪಣ್ಣನವರ ವಿಚಾರಗಳಿಗೆ ಬಸವಣ್ಣನವರು ಸಹ ಮನ್ನಣೆ ನೀಡುತ್ತಿದ್ದರು. ಅಂದಿನ ದಿನಗಳಲ್ಲಿಯೇ ಮಹಿಳೆ ಹಾಗೂ ಸಮಾಜದಲ್ಲಿ ತುಳಿತಕ್ಕೊಳಗಾದವರ ಪರ ತಮ್ಮ ವಚನಗಳ ಮೂಲಕ ದನಿ ಎತ್ತಿದ ಶಿವಶರಣರಲ್ಲಿ ಹಡಪದ ಅಪ್ಪಣ್ಣನವರೂ ಪ್ರಮುಖರು ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಹಡಪದ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರಿಗೆ ಕಟಿಂಗ್ ಶಾಪ್ಗಳನ್ನು ನಿರ್ಮಿಸಲು ಅಥವಾ ಉಪಕರಣಗಳನ್ನು ಖರೀದಿಸಲು ಹಾಗೂ ಮಂಗಳವಾದ್ಯ ನುಡಿಸುವವರಿಗೆ 10 ಸಾವಿರ ರೂ.ಗಳ ಪ್ರೋತ್ಸಾಹಧನವನ್ನು ನೀಡುವಂತೆ ಈ ಬಾರಿಯ ಪಾಲಿಕೆಯ ಬಜೆಟ್ನಲ್ಲಿ ಘೋಷಿಸಿದ್ದು, ಈ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರು ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಡಾ. ಜಯಪ್ಪ ಹೊನ್ನಾಳಿ ಅವರು, ಹಡಪದ ಅಪ್ಪಣ್ಣನವರ ತಂದೆ ಚನ್ನಬಸಪ್ಪ ತಾಯಿ ದೇವಮ್ಮ. ಇವರು ಬಸವನ ಬಾಗೇವಾಡಿಯ ಮೊಸಬಿನ್ನಾಳ ಗ್ರಾಮದವರು. ಈತನ ಹೆಂಡತಿ ಲಿಂಗಮ್ಮ ಕೂಡ ವಚನಗಾರ್ತಿ, ಹಡಪದ ಅಪ್ಪಣ್ಣನಂತೆಯೇ ಸಾತ್ವಿಕ ಸಂಪನ್ನಳಾದ ಈಕೆ ನಿಜಮುಕ್ತೆ ಹಾಗೂ ಪುಣ್ಯಸ್ತ್ರೀ. ಹಡಪದ ಅಪ್ಪಣ್ಣನ ಸಾತ್ವಿಕ ಸಾಧನೆಗೆ ಈಕೆಯೇ ಮೂಲ ಕಾರಣ ಎಂದು ತಿಳಿಸಿದರು.

ಅಂದು ಸಮಾಜದ ಕೆಳಸ್ಥರದಲ್ಲಿದ್ದ ಹಡಪದ ಅಪ್ಪಣ್ಣನನ್ನು ಅತ್ಯಂತ ಆತ್ಮೀಯರ ಸಾಲಿನಲ್ಲಿ ಸ್ವೀಕರಿಸಿದ್ದ ಬಸವಣ್ಣನವರು ತಾರತಮ್ಯ ಹಾಗೂ ಮೌಢ್ಯಾಚಾರವನ್ನು ಹೋಗಲಾಡಿಸಲು ಅಪ್ಪಣ್ಣನವರನ್ನು ಕಂಡ ಬಳಿಕವೇ ನನ್ನನ್ನು ಭೇಟಿ ಮಾಡಲು ಅವಕಾಶ ಎಂದು ಮೌಖಿಕ ಆದೇಶ ಹೊರಡಿಸಿದ್ದರು. ಹಡಪದ ಅಪ್ಪಣ್ಣನವರು ಬದುಕಬಹುದಾದದ್ದನ್ನು ಬರೆದರು, ಬರೆದಂತೆಯೇ ಬದುಕಿದರು. ಇಂದಿಗೆ ಅವರ 251 ವಚನಗಳು ಹಾಗೂ ಲಿಂಗಮ್ಮಳ 135 ವಚನಗಳು ದೊರಕಿವೆ. ಕಳ್ಳನಲ್ಲೂ ಕೂಡಲಸಂಗಮನ ಕಂಡವರು ಬಸವಣ್ಣ. ಇಂತಹ ಶ್ರೇಷ್ಠ ಶರಣರಿಂದ ಗೌರವಕ್ಕೆ ಪಾತ್ರರಾದವರು ಹಡಪದ ಅಪ್ಪಣ್ಣನವರು ಎಂದು ಮಾಹಿತಿ ನೀಡಿದರು.

ಅಪ್ಪಣ್ಣ ಒಪ್ಪಿದರೆ ಕಲ್ಲೂ ಕೂಡ ಶಿವನೇ ಎಂಬ ಬಸವಣ್ಣನವರ ಮಾತು ಅಪ್ಪಣ್ಣನವರ ಮೇಲಿದ್ದ ಗೌರವವನ್ನು ಬಿಂಬಿಸುತ್ತದೆ. ಬಸವಣ್ಣನವರ ಸಾಧನೆ ಹಾಗೂ ಸಿದ್ಧಿ ಪಥದಲ್ಲಿ ಹಡಪದ ಅಪ್ಪಣ್ಣನವರು ಬದುಕಿದರು. ಕಾಯಕಕ್ಕೆ ಯಾವುದೇ ಜಾತಿ ಇಲ್ಲ. ಯಾವ ಕಾಯಕವೂ ಮೇಲು ಅಥವಾ ಕೀಳಲ್ಲ. ಬದಲಾಗಿ ಕಾಯಕ ಧರ್ಮ ಮುಖ್ಯ ಎಂಬುದನ್ನು ಅವರ ವಚನಗಳ ಮೂಲಕ ಸಾರಿದರು. ಹಡಪದ ಎಂದರೆ ಗುಂಪಿನ ನಾಯಕ ಎಂದರ್ಥ ಎಂದರು.

ಕಾರ್ಯಕ್ರಮದಲ್ಲಿ ಉಪ ಮಹಾಪೌರರಾದ ಡಾ. ರೂಪ ಜಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷರಾದ ಜೆ ಗೋವಿಂದರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ ಎನ್ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಸಹಾಯಕ ನಿರ್ದೇಶಕರಾದ ಡಾ. ಎಂ ಡಿ ಸುದರ್ಶನ್ ಅವರು ಭಾಗವಹಿಸಿದ್ದರು.