ನವದೆಹಲಿ: ಇಂದಿನಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಣಿಪುರದ ಪರಿಸ್ಥಿತಿ ಮತ್ತು ದೆಹಲಿ ನಾಗರಿಕ ಸೇವಾ ಸಿಬ್ಬಂದಿಯ ಸುಗ್ರೀವಾಜ್ಞೆ ಸೇರಿದಂತೆ ಹಲವು ವಿಷಯಗಳ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ.
ಮಣಿಪುರದಲ್ಲಿ ಹಿಂಸಾಚಾರದ ಬಗ್ಗೆ ಚರ್ಚೆಗೆ ಸರ್ಕಾರ ಒಪ್ಪಿಗೆ ನೀಡಿದರೆ, ಪ್ರಧಾನ ವಿರೋಧ ಪಕ್ಷವಾದ ಕಾಂಗ್ರೆಸ್ ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಒತ್ತಾಯಿಸಲು ಹಠ ಹಿಡಿದಿದೆ. ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಮುಖಾಮುಖಿಯಾಗುವ ಸಾಧ್ಯತೆಯಿರುವ ಇನ್ನೊಂದು ಪ್ರಮುಖ ವಿಷಯವೆಂದರೆ ದೆಹಲಿ ಸೇವಾ ಸುಗ್ರೀವಾಜ್ಞೆ.
ಮಣಿಪುರದಲ್ಲಿನ ಹಿಂಸಾಚಾರ ಬಗ್ಗೆ ಪ್ರಧಾನಿ ಹೇಳಿಕೆ ನೀಡುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಲೇ ಬಂದಿದ್ದು ಸದನದಲ್ಲಿ ತೀವ್ರ ಗದ್ದಲ ನಡೆಸುವ ಸಾಧ್ಯತೆಯಿದೆ.
ದೆಹಲಿ ಅಧಿಕಾರಶಾಹಿಗಳ ಮೇಲಿನ ಮಸೂದೆಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಮುಂಗಾರು ಅಧಿವೇಶದಲ್ಲಿ ಭಾರಿ ಮುಖಾಮುಖಿಯಾಗುವ ನಿರೀಕ್ಷೆಯಿದೆ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಪ್ರಚಾರ ಮಾಡುತ್ತಿದ್ದಾರೆ. ಪ್ರತಿಪಕ್ಷದಲ್ಲಿ 105 ಸದಸ್ಯರು ಮಸೂದೆಯನ್ನು ವಿರೋಧಿಸಿದ್ದಾರೆ.
ಬಿಜೆಪಿ ಮತ್ತು ಮಿತ್ರಪಕ್ಷಗಳು 105 ಸದಸ್ಯರನ್ನು ಹೊಂದಿರುವ ರಾಜ್ಯಸಭೆಯಲ್ಲಿ ಈ ಮಸೂದೆ ಆಡಳಿತ ಪಕ್ಷಕ್ಕೆ ವರವಾಗುವ ಸಾಧ್ಯತೆಯಿದೆ. ಬಿಜೆಪಿ ಐವರು ನಾಮನಿರ್ದೇಶಿತ ಹಾಗೂ ಇಬ್ಬರು ಸ್ವತಂತ್ರ ಸಂಸದರ ಬೆಂಬಲದ ವಿಶ್ವಾಸದಲ್ಲಿದೆ. ತಲಾ ಒಬ್ಬ ಸಂಸದರನ್ನು ಹೊಂದಿರುವ ಮಾಯಾವತಿಯವರ ಬಹುಜನ ಸಮಾಜ ಪಕ್ಷ, ಜನತಾ ದಳ ಸೆಕ್ಯುಲರ್ ಮತ್ತು ತೆಲುಗು ದೇಶಂ ಪಕ್ಷದ ಬೆಂಬಲವನ್ನೂ ಅದು ನಿರೀಕ್ಷಿಸುತ್ತಿದೆ.
ಮೇ 3 ರಿಂದ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗುತ್ತಿರುವ ಮಣಿಪುರ ರಾಜ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಇಂದು ಸಂಸತ್ತಿನ ಅಧಿವೇಶನ ಆರಂಭ ದಿನವೇ ಕೆಲವು ಪಕ್ಷಗಳು ಮುಂದೂಡಿಕೆ ನಿರ್ಣಯವನ್ನು ಮಂಡಿಸಲು ಯೋಜಿಸಿವೆ.
ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುಂಚಿತವಾಗಿ, ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ ನೀಡಿ, ನಮ್ಮ ಪಕ್ಷದ ಮೊದಲ ಬೇಡಿಕೆಯೆಂದರೆ ಮಣಿಪುರ ವಿಷಯದ ಬಗ್ಗೆ ಸದನದಲ್ಲಿ ಪ್ರಧಾನಿ ಹೇಳಿಕೆ ನೀಡುವುದು ಮತ್ತು ಅದನ್ನು ಚರ್ಚಿಸಲು ನಮಗೆ ಅವಕಾಶ ನೀಡುವುದು. ನಾಳೆ, ನಾವು ಇದರ ಮೇಲೆ ಮುಂದೂಡಿಕೆ ನಿರ್ಣಯವನ್ನು ತರಲು ಬಯಸುತ್ತೇವೆ. ದೇಶದ ಪ್ರಮುಖ ಭಾಗವು ಪ್ರವಾಹದಿಂದ ತತ್ತರಿಸಿದೆ. ಈ ಬಗ್ಗೆಯೂ ಚರ್ಚೆಯಾಗಬೇಕು. ಬಾಲಸೋರ್ ರೈಲ್ವೆ ಅಪಘಾತದ ಬಗ್ಗೆಯೂ ಚರ್ಚಿಸಬೇಕು. ನಿರುದ್ಯೋಗ ಮತ್ತು ಹಣದುಬ್ಬರ ದೇಶದ ಸಾಮಾನ್ಯ ಸಮಸ್ಯೆಗಳಾಗಿವೆ. ದೇಶದ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಹೊಡೆತದ ಬಗ್ಗೆಯೂ ಚರ್ಚಿಸಬೇಕು. ಭಾರತ-ಚೀನಾ ಗಡಿ ಪರಿಸ್ಥಿತಿ ಮತ್ತು ಉಭಯ ದೇಶಗಳ ನಡುವಿನ ವ್ಯಾಪಾರವನ್ನು ಸಹ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನವು ಆಗಸ್ಟ್ 11 ರವರೆಗೆ ಮುಂದುವರಿಯುತ್ತದೆ. ಅಧಿವೇಶನದಲ್ಲಿ ಒಟ್ಟು 17 ದಿನ ಕಲಾಪಗಳು ನಡೆಯಲಿವೆ. ಹಳೆಯ ಸಂಸತ್ ಭವನದಲ್ಲಿ ಅಧಿವೇಶನ ಆರಂಭವಾಗಲಿದ್ದು, ನಂತರ ಹೊಸ ಕಟ್ಟಡಕ್ಕೆ ಮಧ್ಯಭಾಗದಲ್ಲಿ ವರ್ಗಾವಣೆಯಾಗಲಿದ್ದಾರೆ.