ಮೈಸೂರು : ಲಾಭದ ಆಮಿಷವೊಡ್ಡಿ ಆನ್ ಲೈನ್ ಮೂಲಕ ವಂಚನೆ ಮಾಡುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ವ್ಯಕ್ತಿಯೋರ್ವರಿಗೆ 31.29 ಲಕ್ಷ ರೂ. ವಂಚಿಸಲಾಗಿದೆ.
ಕಲ್ಯಾಣಗಿರಿ ನಿವಾಸಿ ಎಲ್. ಅರವಿಂದ ಕುಮಾರ್ (48) ಅವರಿಗೆ ಆನ್ ಲೈನ್ ಮೂಲಕ ಹೆಚ್ಚಿನ ಹಣ ಸಂಪಾದನೆ ಮಾಡುವುದರ ಬಗ್ಗೆ ವಾಟ್ಸಾಪ್ ಮೆಸೇಜ್ ಬಂದಿದೆ. ಮೆಸೇಜ್ ರವಾನೆಯಾದ ಸಂಖ್ಯೆಯನ್ನು ಅವರು ಸಂಪರ್ಕಿಸಲಾಗಿ ವಂಚಕರು ತಿಳಿಸಿದ ಆಪ್ ಅನ್ನು ಇನ್ಸ್ ಸ್ಟಾಲ್ ಮಾಡಿಕೊಂಡು ಹಂತ ಹಂತವಾಗಿ 31,29,922 ರೂ. ಗಳನ್ನು ವರ್ಗಾವಣೆಮಾಡಿ ವಂಚನೆಗೊಳಗಾಗಿದ್ದಾರೆ.
ಮತ್ತೋಂದು ಪ್ರಕರಣದಲ್ಲಿ ಸಾತಗಳ್ಳಿ ನಿವಾಸಿ ಮೊಹಮ್ಮದ್ ಜವಾದಿಷಾನ್ (32) ಎಂಬುವವರಿಗೆ 27844242824 ಸಂಖ್ಯೆಯಿಂದ ಕ್ವಿಕ್ ಸ್ಟಾರ್ಟರ್ ಪ್ಲಾಟ್ ಫಾರಂ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ವರ್ಕ್ ಫ್ರಂ ಹೋಂ ಸಂದೇಶ ಬಂದಿದೆ.
ನಂತರ ಅವರನ್ನು ಟೆಲಿಗ್ರಾಂ ಆಪ್ ಮೂಲಕ ಸಂಪರ್ಕಿಸಿದ ವಂಚಕರು ಗೋಲ್ಡ್ 27 ಎಂಬ ಗ್ರೂಪ್ ನಲ್ಲಿ ಸೇರಿಸಿ ಹೋಟೆಲ್ ರಿವ್ಯೂಮಾಡುವ ಮೂಲಕ ಟ್ರೇಡಿಂಗ್ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತಿದೆ. ಇದನ್ನು ನಂಬಿದ ಅವರು , 36,22,869 ರೂ. ವರ್ಗಾವಣೆಮಾಡಿ ವಂಚನೆಗೊಳಗಾಗಿದ್ದಾರೆ. ಇವೆರಡೂ ಪ್ರಕರಣಗಳೂ ಮೈಸೂರು ನಗರ ಸೆನ್ ಠಾಣೆಯಲ್ಲಿ ದಾಖಲಾಗಿದೆ.