ಮನೆ ಅಪರಾಧ ವಿವಿಧ ಬೇಡಿಕೆ ಈಡೇರಿಕೆಗಾಗಿ ಮೈಸೂರಿನಲ್ಲಿ ಹಲವು ಸಂಘಟನೆಗಳ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗಾಗಿ ಮೈಸೂರಿನಲ್ಲಿ ಹಲವು ಸಂಘಟನೆಗಳ ಪ್ರತಿಭಟನೆ

0

ಮೈಸೂರು(Mysuru): ಬೆಲೆ ಏರಿಕೆ ಖಂಡಿಸಿ, ಇಂಧನ ಬೆಲೆ ಇಳಿಕೆಗೆ ಆಗ್ರಹಿಸಿ ಸಿಪಿಐ, ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರೇ, ನಿವೃತ್ತಿ ವೇತನಕ್ಕೆ ಆಗ್ರಹಿಸಿ ನೂರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಪ್ರತಿಭಟನ ಮೆರವಣೆಗೆ ನಡೆಸಿದರು.

ಸಿಪಿಐ ಕಾರ್ಯಕರ್ತರು ಪುರಭವನದ ಮುಂಭಾಗ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಂಧನ, ಖಾದ್ಯ ತೈಲ, ರಸಗೊಬ್ಬರಗಳ ಬೆಲೆ ಏರಿಕೆಯಿಂದ ಜನರ ಜೀವನ ದುಸ್ತರವಾಗಿದೆ. ಇದರಿಂದ ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಭಾವನಾತ್ಮಕ, ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು, ಹಿಂದೂ, ಮುಸ್ಲಿಮರ ಮಧ್ಯೆ ದ್ವೇಷವನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದರು.

ಪಕ್ಷದ ಹಿರಿಯ ಮುಖಂಡ ಎಚ್.ಆರ್.ಶೇಷಾದ್ರಿ, ಕಾರ್ಯದರ್ಶಿ ಎಚ್.ಬಿ.ರಾಮಕೃಷ್ಣ, ಸಹಕಾರ್ಯದರ್ಶಿ ಕೆ.ಜಿ.ಸೋಮರಾಜೇಅರಸ್, ಕೆ.ಎಸ್.ರೇವಣ್ಣ ಇದ್ದರು.

ಜಿಲ್ಲಾ ಲಾರಿ ಮಾಲೀಕರ ಒಕ್ಕೂಟ:

ಡೀಸೆಲ್‌ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು 30 ದಿನಗಳ ಒಳಗಾಗಿ ಈಡೇರಿಸದೇ ಹೋದರೆ ವಾಣಿಜ್ಯ ವಾಹನಗಳ ಮುಷ್ಕರ ನಡೆಸಲಾಗುವುದು ಎಂದು ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಕೋದಂಡರಾಮು ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಲಾರಿ ಮಾಲೀಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.15 ವರ್ಷ ಹಳೆಯ ವಾಹನಗಳ ಮರುನೋಂದಣಿ ಹಾಗೂ ವಾಹನ ದೃಢೀಕರಣ ಶುಲ್ಕಗಳು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿವೆ. ಇದರಿಂದ ತಮ್ಮ ಲಾರಿಯನ್ನು ರದ್ದಿಗೆ ಹಾಕದೇ ಬೇರೆ ದಾರಿಯೇ ಮಾಲೀಕರ ಬಳಿ ಇಲ್ಲ. ಹೀಗಾಗಿ, ದುಬಾರಿ ದರವನ್ನು ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಸಾರಿಗೆ ಇಲಾಖೆಯು ತನ್ನ 30ಕ್ಕೂ ಅಧಿಕ ಸೇವೆಗಳನ್ನು ಡಿಜಿಟಲ್‌ಗೊಳಿಸಿದೆ. ಹೀಗಿದ್ದರೂ, ಜಿಲ್ಲಾ ಗಡಿಗಳ ಚೆಕ್‌ಪೋಸ್ಟ್‌ಗಳು ಇನ್ನೂ ಕಾರ್ಯನಿರ್ವಹಿಸುತ್ತಿವೆ. ತಪಾಸಣೆ ನೆಪದಲ್ಲಿ ಅಧಿಕಾರಿಗಳ ಕಿರುಕುಳ ಹೆಚ್ಚಾಗಿದೆ. ಬೇರೆ ರಾಜ್ಯಗಳಲ್ಲಿ ಚೆಕ್‌ಪೋ‌ಸ್ಟ್‌ಗಳನ್ನು ರದ್ದುಗೊಳಿಸಿದಂತೆ ನಮ್ಮಲ್ಲೂ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ:

ಬಿಸಿಯೂಟ ಕಾರ್ಮಿಕರಿಗೆ ನಿವೃತ್ತಿ ವೇತನ ಇಲ್ಲವೇ ಇಡುಗಂಟು ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಗರದ ಗನ್‌ಹೌಸ್‌ನಿಂದ ಜಿಲ್ಲಾ ಪಂಚಾಯಿತಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಬಿಸಿಯೂಟ ಯೋಜನೆಯನ್ನು ಕಾಯಂಗೊಳಿಸಿ ಇದರಡಿ ಕೆಲಸ ಮಾಡುವವರನ್ನು ಕಾರ್ಮಿಕರು ಎಂದು ಗುರುತಿಸಬೇಕು, ಕೇಂದ್ರೀಕೃತ ಅಡುಗೆ ವ್ಯವಸ್ಥೆಯನ್ನು ಜಾರಿಗೆ ತರಬಾರದು, ಬೇಸಿಗೆ ರಜೆ ದಿನಗಳ ವೇತನ ನೀಡಬೇಕು, ಪ್ರತಿ ತಿಂಗಳು ನಿಗದಿತದಿನ ವೇತನ ನೀಡಬೇಕು, ಶಾಲಾ ಅವಧಿಯ ನಂತರ ನರೇಗಾ ಯೋಜನೆಯಡಿ ಶಾಲಾ ಕೈತೋಟದ ಕೆಲಸವನ್ನು ನೀಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಅಧ್ಯಕ್ಷೆ ಮಂಜುಳಾ, ಪದಾಧಿಕಾರಿಗಳಾದ ಪುಷ್ಪಾ, ಮಂಗಳಮ್ಮ, ಸರಸ್ವತಿ, ಲೀಲಾವತಿ ಇದ್ದರು.