ಮನೆ ರಾಜ್ಯ ಟೂರಿಸ್ಟ್ ಪೊಲೀಸ್ ವ್ಯವಸ್ಥೆ ಬಗ್ಗೆ ಆಲೋಚನೆ: ಹೆಚ್ ಕೆ ಪಾಟೀಲ್

ಟೂರಿಸ್ಟ್ ಪೊಲೀಸ್ ವ್ಯವಸ್ಥೆ ಬಗ್ಗೆ ಆಲೋಚನೆ: ಹೆಚ್ ಕೆ ಪಾಟೀಲ್

0

ಮೈಸೂರು: ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ಪ್ರವಾಸದ ಪ್ರೇಕ್ಷಣೀಯ ಸ್ಥಳಗಳಲ್ಲಿ ಯಾವುದಾದರು ತೊಂದರೆ ಅವಘಡಗಳು ಸಂಭವಿಸಿದರೆ ಯಾರಿಗೆ ಹೇಳಬೇಕು ಸ್ಥಳದಲ್ಲಿ ಪೊಲೀಸ್ ಠಾಣೆ ಎಲ್ಲಿದೆ ಎಂಬ ಮಾಹಿತಿ ಇರುವುದಿಲ್ಲ ಹಾಗಾಗಿ ಪ್ರವಾಸಿಗರ ನೆರವಿಗಾಗಿ ಟೂರಿಸ್ಟ್ ಪೊಲೀಸ್ ವ್ಯವಸ್ಥೆ ಜಾರಿ ಬಗೆಗೆ ಚಿಂತನೆ ನಡೆಸಿದ್ದೇವೆ ಎಂದು ಕಾನೂನು ನ್ಯಾಯ ಸಂಸದೀಯ ವ್ಯವಹಾರ ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್ ಕೆ ಪಾಟೀಲ್ ಅವರು ತಿಳಿಸಿದರು.

Join Our Whatsapp Group

ಅರಮನೆ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪೊಲೀಸ್ ವ್ಯವಸ್ಥೆಯೊಂದಿಗೆ ಕ್ಯೂಆರ್ ಕೋಡ್ ಬಳಸಿಕೊಂಡು ಹಲವು ಸ್ಥಳಗಳನ್ನು ವೀಕ್ಷಿಸುವ ವ್ಯವಸ್ಥೆಗೂ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಟಿಕೆಟ್ ಕೌಂಟರ್ ಬಳಿ ಗಂಟೆಗಟ್ಟಲೆ ನಿಲ್ಲುವ ಹಾಗೂ ಪ್ರತಿ ಸ್ಥಳದಲ್ಲೂ ಮತ್ತೆ ಮತ್ತೆ ಟಿಕೆಟ್ ತೆಗೆದುಕೊಳ್ಳುವ ಕಷ್ಟ ತಪ್ಪುತ್ತದೆ ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ಇದರಿಂದ ಅನುಕೂಲ ಆಗಲಿದೆ ಎಂದರು.

ಕರ್ನಾಟಕದ ಪರಂಪರೆಯನ್ನು ವಿಶ್ವವಿಖ್ಯಾತಿಗೊಳಿಸಿರುವ ಮೈಸೂರು ನಮ್ಮ ಸಂಸ್ಕೃತಿಯ ಪ್ರತೀಕ. ಬೆಳಿಗ್ಗೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಚಾಮುಂಡಿ ಬೆಟ್ಟದ ಅಭಿವೃದ್ಧಿ ಕುರಿತು ಒಂದಷ್ಟು ಸಲಹೆಗಳನ್ನು ನೀಡಲಾಗಿದೆ. ಪ್ರಸಾದ್ ಯೋಜನೆಯಡಿ ಚಾಮುಂಡಿ ಬೆಟ್ಟದ ಅಭಿವೃದ್ಧಿ ಮಾಡಲಾಗುವುದು. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬಜೆಟ್ ಮಂಡಿಸುವಾಗ ಬೆಟ್ಟದ ಅಭಿವೃದ್ಧಿಯಲ್ಲಿ ರಾಜಕೀಯ ಇಚ್ಛಾಶಕ್ತಿಯನ್ನು ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.

ದಸರಾ ತಯಾರಿ ಆರಂಭವಾಗಿದ್ದು, ದಸರಾ ಮಹೋತ್ಸವಕ್ಕೆ ನಮ್ಮ ಇಲಾಖೆಯಿಂದ ಆಗಬೇಕಾದ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ದಸರಾ ಪ್ರಾಧಿಕಾರ ರಚನೆ ಬಗೆಗೆ ಮುಂಬರುವ ದಿನಗಳಲ್ಲಿ ಚರ್ಚಿಸಲಾಗುವುದು. ಮೈಸೂರಿಗೆ ಒಂದು ವರ್ಷಕ್ಕೆ 50 ಲಕ್ಷ ಜನ ಪ್ರವಾಸಿಗರು ಬರುತ್ತಾರೆ. ಮುಂದಿನ ದಿನಗಳಲ್ಲಿ ಪ್ರವಾಸಿಗರ ಸ್ನೇಹಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು. ಸಂಸ್ಕೃತಿ ಇತಿಹಾಸ ಪರಂಪರೆಯ ಪ್ರತೀಕವಾದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಬಗ್ಗೆ ಸರ್ಕಾರ ವಿಶೇಷ ಕಾಳಜಿವಹಿಸುವುದಾಗಿ ತಿಳಿಸಿದರು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಕಾರ್ಯವೈಖರಿ ನಮಗೆ ಅಸಮಾಧಾನ ತಂದಿದೆ. ಈ ಕುರಿತು ಅಧಿಕಾರಿಗಳಿಂದಲೂ ಅಸಂತೋಷ ವ್ಯಕ್ತವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಒಳಗೊಂಡಂತೆ 3 ಜನರ ಸಮಿತಿ ರಚಿಸಿ 80 ಎಕರೆ ವಿಸ್ತಾರವಾದ ಪ್ರದೇಶವನ್ನು ಯಾವ ರೀತಿ ಬಳಸಿಕೊಂಡು ಅಭಿವೃದ್ದಿ ಪಡಿಸಬಹುದು ಎಂಬುದರ ಬಗ್ಗೆ 20 ದಿನಗಳಲ್ಲಿ ವರದಿ ನೀಡಲಿದ್ದು, ಆ ನಂತರ ಅಭಿವೃದ್ದಿ ಬಗೆಗೆ ಚರ್ಚಿಸಲಾಗುವುದು ಎಂದರು.

ಹತ್ತು ವರ್ಷಗಳ ಬಳಿಕ ಅರಮನೆಯಲ್ಲಿರುವ ಟ್ರೆಜರಿಯನ್ನು ತೆರೆಯಲಾಗಿದ್ದು, ಅದರಲ್ಲಿ 369 ಅಪರೂಪದ ವಸ್ತುಗಳಿವೆ. ತಾಮ್ರಪತ್ರ, ನಟರಾಜ ವಿಗ್ರಹ ಹಾಗೂ ನಾಣ್ಯಗಳು ಸೇರಿದಂತೆ ಹಲವು ವಸ್ತುಗಳು ದೊರೆತ್ತಿದ್ದು, ಅವುಗಳನ್ನು ನೋಡುವ ಅವಕಾಶ ಜನರಿಗೆ ಸಿಗಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಹಳೆ ಕಚೇರಿ ಕಟ್ಟಡವು ಪಾರಂಪರಿಕ ಕಟ್ಟಡವಾಗಿದ್ದು ಅದನ್ನು ವಸ್ತು ಪ್ರದರ್ಶನಕ್ಕೆ ಬಳಸಿಕೊಳ್ಳಲಾಗುವುದು ಮತ್ತು ಅದರ ರಕ್ಷಣೆ ನಿರ್ವಹಣೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಂಗಲ್ ಲಾಡ್ಜ್ ಕಂಪನಿಯು 2020-21ರ ವೇಳೆಯಲ್ಲಿ  61 ಕೋಟಿ ವ್ಯವಹಾರ ನಡೆಸಿದ್ದು, 2022-23ಕ್ಕೆ 111 ಕೋಟಿ ವ್ಯವಹಾರ ವಿಸ್ತಾರವಾಗಿದೆ. ಹಿರಿಯ ನಾಗರಿಕರಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಅಂದರೆ ಪಿಯುಸಿ ಮತ್ತು ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಪ್ಯಾಕೇಜ್ ನೀಡುವ ಮೂಲಕ ಶೇ.40 ರಷ್ಟು ಬರುತ್ತಿರುವ ಪ್ರವಾಸಿಗರನ್ನು ಶೇ.70 ರಷ್ಟಕ್ಕೆ ಹೆಚ್ಚಿಸಲು ಯೋಜನೆ ರೂಪಿಸಲಾಗುವುದು. ಹೆಚ್ಚು ಪ್ರವಾಸಗರನ್ನು ಆಕರ್ಷಿಸುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಒಂದು ಪಾಸ್ ತೆಗೆದುಕೊಂಡು ಹಲವು ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ, ಪ್ರವಾಸೋದ್ಯಮ ಇಲಾಖೆಯ ಎ.ಸಿ.ಎಸ್ ಕಪಿಲ್ ಮೋಹನ್, ಕಾರ್ಯದರ್ಶಿಗಳಾದ ರಾಮ್ ವಿಲಾಸ್ ಪ್ರಸಾದ್, ಬಿ ಜೆ ವಿಜಯ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.