ಮನೆ ರಾಜ್ಯ ಬನ್ನೂರು ರಾಜು ಸಾಹಿತ್ಯ ಪ್ರಭೆ ಭಾರತಾಂಬೆಗೆ ಸಲ್ಲುವಂತದ್ದು: ಅವಧೂತ ಅರ್ಜುನ್ ಗುರೂಜಿ

ಬನ್ನೂರು ರಾಜು ಸಾಹಿತ್ಯ ಪ್ರಭೆ ಭಾರತಾಂಬೆಗೆ ಸಲ್ಲುವಂತದ್ದು: ಅವಧೂತ ಅರ್ಜುನ್ ಗುರೂಜಿ

0

ಮೈಸೂರು: ಪತ್ರಕರ್ತರೂ ಆದ ಸಾಹಿತಿ ಬನ್ನೂರು ರಾಜು ಬರೀ ಮೈಸೂರಿಗೆ ಮಾತ್ರ ಸೀಮಿತವಾದವರಲ್ಲ ಇವರ ಸಾಹಿತ್ಯ ಶಕ್ತಿಯ ಪ್ರಭೆ ಕನ್ನಡ ನಾಡನ್ನಷ್ಟೇ ಅಲ್ಲದೆ ಇಡೀ ಭಾರತವನ್ನು ಬೆಳಗುವಂತಾದ್ದಾಗಿದ್ದು, ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯದ ಶಕ್ತಿ ಏನೆಂಬುದನ್ನು ಜಗತ್ತಿಗೆ ತೋರಿಸುತ್ತದೆಂದು ಶ್ರೀ ಅರ್ಜುನ್ ಅವಧೂತ ಮಹಾರಾಜ್ ಗುರೂಜಿ ಹೇಳಿದರು.

Join Our Whatsapp Group

ನಗರದ ಹೂಟಗಳ್ಳಿಯ ಕನ್ನಡಾಂಬೆ ರಕ್ಷಣಾ ವೇದಿಕೆಯ ವತಿಯಿಂದ ಅಗ್ರಹಾರದಲ್ಲಿರುವ ಹೊಸಮಠದ ಶ್ರೀ ನಟರಾಜ ಭವನದಲ್ಲಿ ಏರ್ಪಡಿಸಿದ್ದ ರಾಜ್ಯ ಕನ್ನಡಾಂಬೆ ರತ್ನ ಪ್ರಶಸ್ತಿ ಪ್ರದಾನ ಮತ್ತು ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ  ಅವರು ಮಾತನಾಡಿದರು.

 ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ಸನ್ಮಾರ್ಗ ತೋರುತ್ತಿರುವ ಬನ್ನೂರು ರಾಜು  ಅವರಂತಹ ಪ್ರತಿಭಾನ್ವಿತ  ಜನೋಪಯೋಗಿ ಶ್ರೇಷ್ಠ  ಸಾಹಿತಿಗಳನ್ನು ಪಡೆದಿರುವ ನಾವು ನಿಜಕ್ಕೂ ಭಾಗ್ಯಶಾಲಿಗಳೆಂದರು.

ಹೆಣ್ಣು ಗಂಡಸಿಗೆ ಸರಿ ಸಮಾನವಷ್ಟೇ ಅಲ್ಲ,ಗಂಡನ್ನು ಮೀರಿಸಿದ ಶಕ್ತಿ ಹೆಣ್ಣಲ್ಲುಂಟು. ಅದಕ್ಕೆನೇ ಹೆಣ್ಣೆಂದರೆ ಪ್ರಕೃತಿ, ಮಹಾಶಕ್ತಿ, ಸೂರ್ಯನಿಗೆ ಸಮಾನ ಶಕ್ತಿಯ ಜ್ಯೋತಿ, ವಿಶ್ವ ರೂಪಿಣಿ,  ಎಲ್ಲರನ್ನೂ ಸಲಹುವ ಮಹಾತಾಯೆಂದು ಹೇಳುವುದು. ಇವತ್ತಿಗೂ ಎಷ್ಟೋ ದೇಶಗಳು ಹೆಣ್ಣಿನಿಂದಲೇ ಮುಂದುವರಿದಿವೆ. ಎಲ್ಲರ ಮಾತೆ ತಾಯಿ ಭಾರತಿಯಷ್ಟೇ ನಮ್ಮ ಕನ್ನಡ ಮಾತೆಯೂ  ಎಲ್ಲರಿಗೂ ಶಕ್ತಿ, ಎಲ್ಲಕ್ಕೂ ಮಹಾಶಕ್ತಿ. ಇಂತಹ ಕನ್ನಡದ ಶಕ್ತಿಯ ಕನ್ನಡಾಂಬೆಯ ಹೆಸರಿನಲ್ಲಿ  ಬನ್ನೂರು ರಾಜು ಅವರಂತಹ ಕನ್ನಡದ ಸಾಹಿತ್ಯ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ನಮ್ಮ ನಾಡಿನಲ್ಲಿ ಯಾವತ್ತೂ ಹೆಣ್ಣಿಗೆ ಪೂಜ್ಯ ಸ್ಥಾನವಿದೆಯೆಂದು ಹೇಳಿದರು.

ನಂತರ ಬನ್ನೂರು ರಾಜು ಅವರಿಗೆ  ರಾಜ್ಯ ಕನ್ನಡಾಂಬೆ ರತ್ನ ಪ್ರಶಸ್ತಿ ನೀಡಿ ಗೌರವಿಸಿದರಲ್ಲದೆ ಪ್ರಸ್ತುತ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕಗಳನ್ನು ಗಳಿಸಿದ ಮೈಸೂರು ಜಿಲ್ಲೆಯ 35 ಕ್ಕೂ ಹೆಚ್ಚು ಮಂದಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

ಕನ್ನಡಾಂಬೆ ರತ್ನ ಪ್ರಶಸ್ತಿ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಸಾಹಿತಿ ಬನ್ನೂರು ರಾಜು ಅವರು,  ವಿದ್ಯೆಯಿರದವರ ಬಾಳು ಕಣ್ಣಿದ್ದೂ ಕುರುಡರಂತಾದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯೆಯ ಮಹತ್ವವನ್ನು ಅರಿತು ಶಿಕ್ಷಣವಂತರಾಗಿ ‘ನಿನ್ನ ಬಾಳಿನ ಶಿಲ್ಪಿ ನೀನೆ’ ಎಂಬ ಸ್ವಾಮಿ ವಿವೇಕಾನಂದರ ವಾಣಿಯ ರೀತಿ ಸ್ವಾಭಾವಿಕ ಸಸ್ಯಗಳಂತೆ ಬೆಳೆದು ತಮ್ಮ ಬದುಕನ್ನು, ಭವಿಷ್ಯವನ್ನು ತಾವೇ ಸುಂದರವಾಗಿ ಕಟ್ಟಿ ಕೊಳ್ಳಬೇಕು.ಕಾಡು ಮೇಡು ಗಳಲ್ಲಿ, ಬೆಟ್ಟಗುಡ್ಡಗಳಲ್ಲಿ ಪ್ರಕೃತಿ ಸಹಜವಾಗಿ ತನ್ನಂತಾನೆ ಬೆಳೆಯುವ ಸ್ವಾಭಾವಿಕ ಸಸ್ಯಗಳನ್ನು ಯಾರೂ  ಪೋಷಣೆ ಮಾಡಿ ಬೆಳೆಸುವುದಿಲ್ಲ. ಅವು ತಮ್ಮ ಸುತ್ತಲೂ ಇರುವ ಪರಿಸರದ ಫಲವತ್ತತೆಯನ್ನು ಹೀರಿಕೊಂಡು  ನಿಸರ್ಗದತ್ತವಾಗಿ ಬೆಳೆಯುತ್ತವೆ. ಅದೇ ರೀತಿ ವಿದ್ಯಾರ್ಥಿಗಳು ಕೂಡ ಪ್ರತಿಯೊಂದಕ್ಕೂ ಇತರರ ಮೇಲೆ ಅವಲಂಬಿತವಾಗದೆ ಪರಾವಲಂಬಿತನವನ್ನು ಬಿಟ್ಟು ತಮ್ಮ ಸುತ್ತಲಿನ ಸಮಾಜದಲ್ಲಿ ಸುಲಭವಾಗಿ ದೊರೆಯುವಂತಹ ಜ್ಞಾನ ಸಂಪದವನ್ನು ಸದುಪಯೋಗ ಮಾಡಿಕೊಂಡು ಸ್ವಶಕ್ತಿಯಿಂದ ಸಹಜವಾಗಿ ಬುದ್ದಿವಂತರಾಗಿ, ಜ್ಞಾನವಂತರಾಗಿ,ವಿವೇಕವಂತರಾಗಿ ಬೆಳೆಯಬೇಕು ಎಂದು ತಿಳಿಸಿದರು.

ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳು ಉತ್ತಮವಾಗಿ ಓದುವುದರ ಜೊತೆಗೆ ಅಷ್ಟೇ  ವಿದ್ಯೆ ಕಲಿಸುವ ಗುರುಗಳ ಬಗ್ಗೆ ಬಹು ದೊಡ್ಡ ಗೌರವ ಇಟ್ಟುಕೊಂಡು ಕಲಿಯಬೇಕು. ಹಿಂದೆ ಗುರು ಮುಂದೆ ಗುರಿ ಇಟ್ಟುಕೊಂಡಿರುವ ವಿದ್ಯಾರ್ಥಿಗಳಾರೂ  ಸಾಧನೆಯಿಂದ ಹಿಂದೆ ಬಿದ್ದಿಲ್ಲ. ಹಾಗಾಗಿ ದೊಡ್ಡ ದೊಡ್ಡ ಕನಸುಗಳನ್ನು, ದೊಡ್ಡ ದೊಡ್ಡ ಗುರಿಗಳನ್ನು ಹೊಂದಿ ವಿದ್ಯಾರ್ಥಿಗಳು ಸಾಧಕರಾಗಬೇ ಕೆಂದು ಹೇಳಿದ ಅವರು ಭವಿಷ್ಯದಲ್ಲಿ ವಿದ್ಯಾರ್ಥಿಗಳೆಲ್ಲರೂ  ಬಹುದೊಡ್ಡ ಸಾಧಕರಾಗುವಂತೆ  ಹಾರೈಸಿದರು.

ಕ್ರೆಡಿಟ್- ಐ ನ ಮ್ಯಾನೇಜಿಂಗ್  ಟ್ರಸ್ಟಿ ಡಾ.ಎಂ.ಪಿ.ವರ್ಷ ಅವರು ಕಾರ್ಯಕ್ರಮ ಕುರಿತು ಪ್ರಧಾನ ಭಾಷಣ ಮಾಡಿದರು. ಬಿಗ್ ಬಾಸ್ ಖ್ಯಾತಿಯ ಜಾದು ಕಲಾವಿದೆ ಸುಮಾ ರಾಜಕುಮಾರ್, ಹುಲಿದುರ್ಗ ಚಿತ್ರದ ಖ್ಯಾತಿಯ ಯುವ ನಾಯಕ ನಟ ಸುಪ್ರೀತ್ ಮಾತನಾಡಿದರು.

ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಬಿ.ಬಿ.ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಬಸವೇಶ್ವರ ಸಾಂಸ್ಕೃತಿಕಪ್ರತಿಷ್ಠಾನದ ಅಧ್ಯಕ್ಷ ಬಸವರಾಜೇಂದ್ರಸ್ವಾಮಿ, ಮುಖ್ಯ ಶಿಕ್ಷಕರಾದ ಎಂ.ಸಿ. ಉಮಾ ಶಂಕರ್, ಶಿಕ್ಷಕಿ ಸಂಗೀತ, ಮೈಸೂರು ಲಯನ್ ಗೋಲ್ಡನ್ ಸಿಟಿ ಅಧ್ಯಕ್ಷ ಸುರೇಶ್ ಗೋಲ್ಡ್, ಎಂ.ಸಿ.ಮಹಾದೇವ್, ಪತ್ರಕರ್ತ ಕರ್ಪೂರವಳ್ಳಿ ಮಹದೇವ್, ಸಿ.ಎಂ. ರಾಮು, ಉತ್ತನಹಳ್ಳಿ ಮಹಾದೇವ, ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಗೋಪಾಲ್ ಸಿಂಗ್, ಬಸವನಾಯಕ, ಎ.ಸಂಗಪ್ಪ, ಎನ್. ಕೆ. ಕಾವೇರಿಯಮ್ಮ ಉತ್ತನಹಳ್ಳಿ ಶಿವಣ್ಣ, ವೇದಿಕೆಯ ನಂಜುಂಡ, ಸಿ.ಪಿ. ಕುಮಾರ್, ರೂಪಾ, ಸಿಂಗ್ರಿಗೌಡ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.