ಮನೆ ರಾಜ್ಯ ರೇಷ್ಮೆ ಉತ್ಪನ್ನಗಳನ್ನು ದುಪ್ಪಟ್ಟು ಮಾಡುವ ಗುರಿ ನಮ್ಮದು: ಕೆ. ವೆಂಕಟೇಶ್

ರೇಷ್ಮೆ ಉತ್ಪನ್ನಗಳನ್ನು ದುಪ್ಪಟ್ಟು ಮಾಡುವ ಗುರಿ ನಮ್ಮದು: ಕೆ. ವೆಂಕಟೇಶ್

0

ಮೈಸೂರು: ಮೈಸೂರು ಸಿಲ್ಕ್ ರೇಷ್ಮೆ ಉದ್ಯಮಕ್ಕೆ ಹೆಸರುವಾಸಿಯಾಗಿರುವ ನಮ್ಮ ರಾಜ್ಯದಲ್ಲಿ ಕರ್ನಾಟಕ ಸಿಲ್ಕ್ ಕಾರ್ಪೊರೇಷನ್ ಮಳಿಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತೆರೆಯಲಾಗುವುದು. ರೇಷ್ಮೆ ಉದ್ಯಮಗಳ ಬೆಳವಣಿಗೆಯನ್ನು ಮುಂದಿನ ದಿನಗಳಲ್ಲಿ ದುಪ್ಪಟ್ಟು ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ರೇಷ್ಮೆ ಮತ್ತು ಪಶು ಸಂಗೋಪನೆ ಇಲಾಖೆಯ ಸಚಿವರಾದ ಕೆ.ವೆಂಕಟೇಶ್ ರವರು ತಿಳಿಸಿದರು.

Join Our Whatsapp Group


ಇಂದು ನಗರದ ಕೆ.ಎಸ್.ಐ.ಸಿ ಆವರಣದಲ್ಲಿ ಕಾರ್ಖಾನೆಯಲ್ಲಿನ ಕಾರ್ಯವೈಖರಿಯನ್ನು ವೀಕ್ಷಿಸಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, KSIC ಮಳಿಗೆಗಳನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಪ್ರವಾಸಿಗರ ಪ್ರೇಕ್ಷಣೀಯ ಸ್ಥಳಗಳಲ್ಲಿ ಹೆಚ್ಚಿನ ಮಳಿಗೆೆಗಳನ್ನು ತೆರೆದು ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುವುದು. ಕಾರ್ಖಾನೆಗಳಲ್ಲಿ ಉತ್ಪನ್ನಗಳ ಹೆಚ್ಚಳಕ್ಕಾಗಿ ವಿವಿಧ ರೀತಿಯ ಉತ್ತಮ ಉಪಕರಣಗಳನ್ನು ಅಳವಡಿಸಿ, ಕಾರ್ಖಾನೆಗಳಲ್ಲಿನ ಕಾರ್ಯವೈಖರಿಯನ್ನು ವೃದ್ಧಿಸಲಾಗುವುದು ಎಂದರು.
ಸರ್ಕಾರದಿಂದ ಮುಂದಿನ ದಿನಗಳಲ್ಲಿ ಉತ್ತಮವಾದ ರೇಷ್ಮೆ ಬೆಳೆ ಬೆಳೆಯಲು ಸಹಾಯಕವಾಗುವಂತಹ ಯೋಜನೆಗಳನ್ನು ರೂಪಿಸಲಾಗುವುದು. ರೈತರಿಂದ ನೇರವಾಗಿ ಉತ್ತಮ ಬೆಲೆಯನ್ನು ನೀಡಿ ರೇಷ್ಮೆಯನ್ನು ಖರೀದಿಸಿ, ರೈತರ ಆರ್ಥಿಕ ಸಂಕಷ್ಟಕ್ಕೆ ನೆರವಾಗುವ ರೀತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
2022ನೇ ಸಾಲಿನಲ್ಲಿ ಕಾರ್ಖಾನೆಯಲ್ಲಿ ಒಟ್ಟು 4.5 ಲಕ್ಷ ಮೀಟರ್ ರೇಷ್ಮೆ ಉತ್ಪನ್ನಗಳನ್ನು ತಯಾರಿಸಲಾಗಿತ್ತು. ಕಳೆದ ಸಾಲಿನಲ್ಲಿ 200 ಕೋಟಿಯಷ್ಟು ಆದಾಯ ಬಂದಿದೆ. 2023 ನೇ ಸಾಲಿನಲ್ಲಿ 1 ಲಕ್ಷ ಮೀಟರ್ ರೇಷ್ಮೆ ಉತ್ಪನ್ನಗಳು ಹೆಚ್ಚಳಗೊಂಡಿದ್ದು, ಈ ಬಾರಿ 240 ಕೋಟಿ ಆದಾಯವನ್ನು ಗಳಿಸಿದೆ. ಕೆಳೆದ ವರ್ಷಕ್ಕಿಂತ 40 ಕೋಟಿ ಹೆಚ್ಚು ಆದಾಯವನ್ನು ಪಡೆದಿದ್ದೇವೆ. ಕಾರ್ಖಾನೆಗಳಲ್ಲಿನ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರದ ನಿಯಮಾವಳಿಗಳಂತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಮತ್ತು ಉತ್ತಮ ಯಂತ್ರೋಪಕರಣಗಳನ್ನು ಕಾರ್ಖಾನೆಗೆ ಒದಗಿಸಲಾಗುವುದು ಹಾಗೂ ನೌಕರರು ರೇಷ್ಮೆ ನೇಯ್ಗೆಯಲ್ಲಿ ಉತ್ತಮ ಕೌಶಲ್ಯ ಅಳವಡಿಸಿಕೊಂಡು ಉತ್ಪಾದನೆ, ಗುಣಮಟ್ಟಕ್ಕೆ ಆದ್ಯತೆ ನೀಡುವಂತೆ ತಿಳಿಸಲಾಗಿದೆ ಎಂದರು.