ಮನೆ ಸುದ್ದಿ ಜಾಲ ಬೆಂ-ಮೈ ಎಕ್ಸ್‌ ಪ್ರೆಸ್‌ ವೇನಲ್ಲಿ ನೆಲಕ್ಕುರುಳುತ್ತಿವೆ ವಿದ್ಯುತ್ ಟವರ್‌ ಗಳು

ಬೆಂ-ಮೈ ಎಕ್ಸ್‌ ಪ್ರೆಸ್‌ ವೇನಲ್ಲಿ ನೆಲಕ್ಕುರುಳುತ್ತಿವೆ ವಿದ್ಯುತ್ ಟವರ್‌ ಗಳು

0

ಮಂಡ್ಯ:ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲಿ ಅಳವಡಿಸಿರುವ ವಿದ್ಯುತ್ ಟವರ್‌ ಗಳು ನೆಲಕ್ಕುರುಳುತ್ತಿವೆ. ಹೆದ್ದಾರಿ ಕಾಮಗಾರಿಯಿಂದಾಗಿ ವಿದ್ಯುತ್ ಟವರ್‌ ಗಳನ್ನು ಸ್ಥಳಾಂತರಿಸಿ ನಂತರ ಸೆಸ್ಕ್‌ಗೆ ಹಸ್ತಾಂತರ ಮಾಡುವ ಜವಾಬ್ದಾರಿ ಹೊತ್ತಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಟವರ್‌ ಗಳ ವಿನ್ಯಾಸ ಹಾಳಾಗಿ ಗಾಳಿಗೆ ನೆಲಕ್ಕುರುಳುತ್ತಿದ್ದರೂ ಅಪಾಯದ ಪರಿವೇ ಇಲ್ಲದೆ ಬೇಜವಾಬ್ದಾರಿತನ ತೋರುತ್ತಾ ದಿವ್ಯನಿರ್ಲಕ್ಷ್ಯ ವಹಿಸಿದ್ದಾರೆ.

Join Our Whatsapp Group


ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಹಿಡಿದು ಸಂಸದೆ ಸುಮಲತಾ ಅಂಬರೀಶ್, ಮೈಸೂರು ಸಂಸದ ಪ್ರತಾಪ್‌ ಸಿಂಹ, ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸೆಸ್ಕಾಂ ಇಲಾಖೆ ಅಧಿಕಾರಿಗಳವರೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಾಮಗಾರಿ ಪೂರ್ಣಗೊಳಿಸಿ ಸೆಸ್ಕಾಂ ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಿದ್ದರೂ, ಭಂಡತನ ಪ್ರದರ್ಶಿಸುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ.
ಜಿಲ್ಲೆಯೊಳಗೆ ದಶಪಥ ಹೆದ್ದಾರಿ ಹಾದು ಹೋಗಿರುವ ಮದ್ದೂರು ಗಡಿಭಾಗ ನಿಡಘಟ್ಟದಿಂದ ಶ್ರೀರಂಗಪಟ್ಟಣದಿಂದ ಗಡಿಭಾಗದಿಂದ ಕಳಸ್ತವಾಡಿವರೆಗೆ 400 ವಿದ್ಯುತ್ ಟವರ್‌ ಗಳನ್ನು ಅಳವಡಿಸಲಾಗಿದ್ದು, ಇವುಗಳ ಮೂಲಕ ಅಕ್ಕ-ಪಕ್ಕದ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಮಾಡಲಾಗುತ್ತಿತ್ತು.
ದಶಪಥ ಹೆದ್ದಾರಿ ಕಾಮಗಾರಿಗೆ ಅನುಕೂಲವಾಗುವಂತೆ ರಸ್ತೆ ಪಕ್ಕದಲ್ಲಿದ್ದ ಟವರ್‌ ಗಳನ್ನು ಸ್ಥಳಾಂತರಿಸಲು ಹೆದ್ದಾರಿ ಪ್ರಾಧಿಕಾರದವರಿಗೆ ಅನುಮತಿ ನೀಡಲಾಗಿತ್ತು. ಹೀಗೆ ಅನುಮತಿ ನೀಡುವ ವೇಳೆ ವಿದ್ಯುತ್ ಟವರ್‌ ಗಳ ವಿನ್ಯಾಸಕ್ಕೆ ಧಕ್ಕೆಯಾಗದಂತೆ ಯಥಾಸ್ಥಿತಿಯಲ್ಲಿ ಸ್ಥಳಾಂತರಿಸಿ ಇಲಾಖೆಗೆ ಹಸ್ತಾಂತರಿಸುವಂತೆ ಷರತ್ತನ್ನು ವಿಧಿಸಲಾಗಿತ್ತು.
ಹೆದ್ದಾರಿ ಪ್ರಾಧಿಕಾರದವರು ದಶಪಥ ಹೆದ್ದಾರಿ ನಿರ್ಮಾಣಕ್ಕೆ ಸ್ಥಳಾಂತರಿಸಿದ್ದ ಟವರ್‌ಗಳು 18 ಮೀಟರ್‌ ನಿಂದ 21 ಮೀಟರ್ ಎತ್ತರದ್ದವಾಗಿವೆ. ರಾತ್ರಿ ವೇಳೆ ಟವರ್‌ಗಳ ಜೋಡಣಾ ಕಂಬಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಸುಮಾರು ಟವರ್‌ನ ಅರ್ಧಭಾಗದಷ್ಟು ಜೋಡಣಾ ಕಂಬಿಗಳೇ ಇಲ್ಲದೆ ಖಾಲಿಯಾಗಿದೆ. ಟವರ್‌ ಗಳ ವಿನ್ಯಾಸ ಬಹುತೇಕ ಹಾಳಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಟವರ್‌ ಗಳನ್ನು ಸ್ಥಳಾಂತರ ಮಾಡಿದ ಬಳಿಕ ಪೆಟ್ರೋಲಿಂಗ್ ಮಾಡುವ ಮೂಲಕ ಜೋಡಣಾ ಕಬ್ಬಿಣಗಳು ಕಳುವಾಗದಂತೆ ಎಚ್ಚರ ವಹಿಸಬೇಕಿತ್ತು. ಅವರ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯದಿಂದ ವಿದ್ಯುತ್ ಟವರ್‌ ಗಳು ಬೋಳು ಬೋಳಾಗಿ ನಿಂತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವಿದ್ಯುತ್ ಟವರ್‌ ಗಳು ಸುಭದ್ರವಾಗಿರುವಂತೆ ಅಳವಡಿಸಿದ್ದ ಜೋಡಣಾ ಕಂಬಿಗಳನ್ನು ಕಳ್ಳರು ಕದ್ದೊಯ್ದಿರುವುದರಿಂದ ಟವರ್‌ ಗಳು ದುರ್ಬಲ ಸ್ಥಿತಿಯಲ್ಲಿವೆ. ಗಾಳಿಗೆ ನೆಲಕ್ಕುರುಳಲಾರಂಭಿಸಿವೆ. ಈಗಾಗಲೇ ಮದ್ದೂರಿನ ರುದ್ರಾಕ್ಷಿಪುರ, ಶ್ರೀರಂಗಪಟ್ಟಣದ ತೂಬಿನಕೆರೆ ಸೇರಿದಂತೆ ಹಲವೆಡೆ ನಾಲ್ಕೈದು ಟವರ್‌ ಗಳು ಹೆದ್ದಾರಿ ರಸ್ತೆಗೆ ಉರುಳಿಬಿದ್ದಿವೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.