ಮೈಸೂರು(Mysuru): ಓದಿನ ಜೊತೆ ಉದ್ಯೋಗಾವಕಾಶದ ಬಗ್ಗೆಯೂ ವಿದ್ಯಾರ್ಥಿಗಳು ಅರಿತುಕೊಳ್ಳಬೇಕಾಗಿದ್ದು, ಇದಕ್ಕಾಗಿ ಇಚ್ಛಾಶಕ್ತಿ ತುಂಬಾ ಮುಖ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ(Mysore University) ಕುಲಸಚಿವ(Chancellor) ಪ್ರೊ.ಆರ್.ಶಿವಪ್ಪ(Prof.R.Shivappa) ತಿಳಿಸಿದ್ದಾರೆ.
ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸಮಾಜ ಕಾರ್ಯ ವಿಭಾಗದ ವತಿಯಿಂದ ‘ಮೇಜರ್ ರಿಸರ್ಚ್ ಪ್ರಾಜೆಕ್ಟ್-2022’ ಎಂಬ ವಿಷಯದ ಬಗ್ಗೆ ನಡೆದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಜಗತ್ತನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ಗ್ರಾಮೀಣ ಬದುಕು, ಆದಿವಾಸಿಗಳ ಜೀವನ ಶೈಲಿಯನ್ನು ಅರಿತುಕೊಳ್ಳಿ. ಒಂದು ಶಿಸ್ತನ್ನು ಅಳವಡಿಸಿಕೊಳ್ಳಬೇಕು. ವಸ್ತು ವಿಷಯವನ್ನು ಗ್ರಹಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳಬೇಕು. ಯಾರನ್ನೋ ಮೆಚ್ಚಿಸಲು ಕೆಲಸ ಮಾಡಬೇಡಿ. ನಿಮ್ಮ ಜ್ಞಾನ ವಿಕಸನಕ್ಕಾಗಿ ಕೆಲಸ ನಿರ್ವಹಿಸಿ ಎಂದರು.
ಇಂದು ಮಾಹಿತಿ ಸಂಗ್ರಹಿಸಲು ಮೊಬೈಲ್, ಇಂಟರ್ ನೆಟ್ ಆ್ಯಪ್ ನಂತಹ ಸಾಕಷ್ಟು ಸಾಧನಗಳಿವೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಇದಕ್ಕಾಗಿ ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ ತುಂಬಾ ಮುಖ್ಯ. ನಿಮ್ಮಲ್ಲೇ ಆರೋಗ್ಯಕರ ಸ್ಪರ್ಧೆ ಇರಬೇಕು. ಡಾಟಾ ಸಂಗ್ರಹಿಸುವಾಗ ಏಕಾಗ್ರತೆ ಹಾಗೂ ಬದ್ಧತೆ ಇರಬೇಕು ಎಂದರು.
ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಜ್ಯೋತಿ ಎಚ್.ಪಿ. ಮಾತನಾಡಿ, ಮೂರನೇ ಸೆಮಿಸ್ಟರ್ ನಲ್ಲಿ ಈ ಕಾರ್ಯಕ್ರಮ ಮಾಡುವ ಉದ್ದೇಶ ಇತ್ತು. ಆದರೆ, ಕೊರೊನಾದಿಂದ ಅದು ಸಾಧ್ಯವಾಗಲಿಲ್ಲ. ಮೇಜರ್ ರಿಸರ್ಚ್ ಮಾಡುವ ಬಗೆ ಹೇಗೆ ಎಂಬುದನ್ನು ತಿಳಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶ. ಸಂಶೋಧನಾ ಬಗೆ, ದತ್ತಾಂಶ ಸಂಗ್ರಹಿಸುವುದು ಹೇಗೆ? ಯಾವ ವಿಧಾನದಲ್ಲಿ ಈ ಕಾರ್ಯಕ್ರಮ ಮಾಡಬೇಕು ಎಂಬಿತ್ಯಾದಿ ಅಂಶಗಳನ್ನು ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ತಿಳಿದುಕೊಳ್ಳಬಹುದು ಎಂದರು.