ಬೆಂಗಳೂರು: ರಾಜ್ಯದಲ್ಲಿ ಡಿಜಿಪಿ ಬದುಕಿದ್ದಾರೆ, ಕಾನೂನು ಇದೆ ಎನ್ನುವುದಾದರೆ ಇತರ ಪ್ರಕರಣಗಳಲ್ಲಿ ಏನು ಕ್ರಮ ಆಗುತ್ತದೋ ಅದೇ ರೀತಿಯಲ್ಲಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿಯೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು “ಹೋಂ ಮಿನಿಸ್ಟರ್ ಏನೂ ಮಾಡಲ್ಲ, ಸಿಎಂ ಕೂಡಾ ಏನೂ ಮಾಡಲ್ಲ. ಆದರೆ ರಾಜ್ಯದಲ್ಲಿ ಪೊಲೀಸ್ ಮಹಾನಿರ್ದೇಶಕರು ( ಡಿಜಿಪಿ) ಬದುಕಿದ್ದಾರೆ ಅಂದರೆ ಬೇರೆ ಎಲ್ಲರಿಗೂ ಏನು ಕ್ರಮ ಆಯ್ತು ಅದೇ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಕರಣದ ಬಗ್ಗೆ ಸೂಕ್ತ ತನಿಖೆ ಆಗಬೇಕು, ಎಫ್ಐಆರ್ ದಾಖಲಿಸಿಕೊಳ್ಳಬೇಕು. ಎಫ್ಐಆರ್ ಆಧಾರದಲ್ಲಿ ಅದರ ಮೇಲೆ ತನಿಖೆ ಮಾಡಿ ಕ್ರಮ ಜರಗಿಸಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದರು. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಹೇಳಿದ್ದು ಎಲ್ಲ ಸರಿ ಎಂದು ನಾನು ಹೇಳಲು ತಯಾರಿಲ್ಲ. ಡೆತ್ ನೋಟ್ ಬಂದರೆ ಎಫ್ಆರ್ ಆರ್ ಏನು ಮಾಡುತ್ತೀರಿ. ಅದರಂತೆ ಎಫ್ಐ ಆರ್ ಮಾಡಿ ಎಂದರು. ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ 40 ಶೇ ಕಮಿಷನ್ ಬೇಡಿಕೆಯ ಆರೋಪ ಮಾಡಿದ್ದ. ಈ ನಡುವೆ ಕಳೆದ ಒಂದು ವಾರದಿಂದ ಸಂತೋಷ್ ಪಾಟೀಲ್ ನಾಪತ್ತೆಯಾಗಿದ್ದ. ಇದೀಗ ಸಂತೋಷ್ ಪಾಟೀಲ್ ಉಡುಪಿಯ ವಸತಿ ಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.














