ಉಡುಪಿ: ಕಾಲೇಜು ವಾಶ್ ರೂಮ್ ನಲ್ಲಿ ವಿದ್ಯಾರ್ಥಿನಿಯ ವಿಡಿಯೋ ಮಾಡಿರುವ ಪ್ರಕರಣದ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂತ್ರಸ್ತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು, ಸತ್ಯವನ್ನು ಬಹಿರಂಗಪಡಿಸಲು ತಾಂತ್ರಿಕ ತನಿಖೆಯ ಅಗತ್ಯವಿದೆ ಎಂದರು.
ಉಡುಪಿಯಲ್ಲಿ ನಡೆದ ಘಟನೆ ರಾಷ್ಟ್ರವ್ಯಾಪಿ ಗಮನ ಸೆಳೆದಿದೆ. ತನ್ನ ಕ್ಷೇತ್ರದ ವಿದ್ಯಾರ್ಥಿಗಳ ಹಿತ ಕಾಪಾಡುವುದು ಮತ್ತು ಈ ಸಮಯದಲ್ಲಿ ಅವರಿಗೆ ನ್ಯಾಯ ಸಿಗುವಂತೆ ಮಾಡಲು ಹಾಗೂ ಬೆಂಬಲ ನೀಡುವುದು ಅತ್ಯಗತ್ಯ ಎಂದು ಹೇಳಿದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರೆ ಏನಾಗಬಹುದು ಎಂದು ನಾವು ಹಿಂದೆಯೇ ಹೇಳಿದ್ದೆವು. ಅದನ್ನೇ ನಾವು ನಮ್ಮ ಕಣ್ಣಮುಂದೆ ನೋಡುತ್ತಿದ್ದೇವೆ ಎಂದ ಅವರು, ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಈ ಬಗ್ಗೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಯಾಗಬೇಕು. ಘಟನೆಯಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳನ್ನು ಕೇವಲ ಪ್ರಶ್ನಿಸುವ ಬದಲು, ಸತ್ಯವನ್ನು ಕಂಡುಕೊಳ್ಳಲು ಸಂಪೂರ್ಣ ತಾಂತ್ರಿಕ ತನಿಖೆ ನಡೆಸಬೇಕು ಎಂದು ಅವರು ಹೇಳಿದರು.