ಮಂಡ್ಯ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಸಿಡೆದೆದ್ದಿರುವ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಂಡ್ಯದ ಡಿಸಿ ಕಚೇರಿ ಮುಂದೆ ತಮಟೆ ವಾದ್ಯ ಬಾರಿಸುವ ಮೂಲಕ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯಿಂದ ರೈತರ ಬೃಹತ್ ಮೆರವಣಿಗೆಗೆ ಚಾಲನೆ ನೀಡಲಾಗಿತ್ತು. ತಮಟೆ ಸದ್ದಿನ ಮೂಲಕ ರೈತರ ಬೃಹತ್ ಮೆರವಣಿಗೆ ಆರಂಭವಾಗಲಿದೆ.
ಡಿಸಿ ಕಚೇರಿಗೆ ಮುತ್ತಿಗೆಗೆ ಹಾಕಲು ಯತ್ನಿಸಿದ ಹಿನ್ನಲೆ ಡಿಸಿ ಕಚೇರಿ ಮುಂಭಾಗದ ಬ್ಯಾರಿಕೇಡ್ ಹಾಕಿ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿತ್ತು.
ಈ ಹಿನ್ನೆಲೆ ಮೆರವಣಿಗೆ ಡಿಸಿ ಕಚೇರಿ ತಲುಪಿದ ಬಳಿಕ ರೈತರು ಧರಣಿ ಕುಳಿತಿದ್ದು, ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಕಬ್ಬಿಗೆ ಬೆಲೆ ಏರಿಕೆಗೆ 108 ದಿನ ರೈತರು ಪ್ರತಿಭಟನೆ ಮಾಡಿದ್ದರು. ಎಫ್ ಆರ್ ಪಿ FRP ದರ ಏರಿಕೆ ಮಾಡಬೇಕು. ಸರ್ಕಾರ ಯಾವ ಬಿಲ್ ಸಹ ಸರಿಯಾಗಿ ನೀಡ್ತಿಲ್ಲ. ಟನ್ ಕಬ್ಬಿಗೆ 4500 ರೂ ನಿಗದಿ ಮಾಡಬೇಕು. ಎಸ್ ಎಪಿ ಜಾರಿ ಮಾಡಿ ರೈತರ ನೆರವಿಗೆ ರಾಜ್ಯ ಸರ್ಕಾರ ಬರಬೇಕು ಎಂದು ಒತ್ತಾಯಿಸಿದರು.
ಕಬ್ಬಿನ ಕಟಾವು, ಸಾಗಾಣಿಕೆ ವೆಚ್ಚ ಕಡಿಮೆ ಮಾಡಬೇಕು. ಕಬ್ಬು ಬೆಳೆಗಾರರನ್ನ ರಕ್ಷಣೆ ಮಾಡಬೇಕು. ಡ್ಯಾಂ ಗೆ ನೀರು ಬಂದಿದೆ. ಕೂಡಲೇ ನೀರಾವರಿ ಸಲಹಾ ಸಮಿತಿಯ ಸಭೆ ಕರೆದು ಭತ್ತಕ್ಕೆ ನೀರು ಕೊಡಬೇಕು. ಆಗಸ್ಟ್ ತಿಂಗಳಲ್ಲಿ ಭತ್ತದ ನಾಟಿಯಾಗಬೇಕು ಎಂದು ತಿಳಿಸಿದರು.
ಹಾಲು ಉತ್ಪಾದಕರಿಗೆ ಹಾಲಿನ ದರ ಕಡಿಮೆ ಮಾಡಿದ್ದಾರೆ. ತಕ್ಷಣವೇ ಹಾಲಿನ ದರ ಏರಿಕೆ ಮಾಡಬೇಕು. ಕೆಆರ್ ಎಸ್ ಡ್ಯಾಂ ಪಕ್ಕ ಡಿಸ್ನಿಲ್ಯಾಂಡ್ ಮಾಡ್ತಿದ್ದಾರೆ ಹೋರಾಟ ಮಾಡಿದ್ದೆವು. ಡಿಸ್ನಿಲ್ಯಾಂಡ್ ಯಾವುದೇ ಕಾರಣಕ್ಕೂ ಮಾಡಬಾರದು. ಡಿಸ್ನಿಲ್ಯಾಂಡ್ ನಿರ್ಮಾಣ ಮಾಡಿದ್ರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಆಗ್ರಹಿಸಿದರು.
ರೇಷ್ಮೆ ಬೆಳೆಗಾರರ ರಕ್ಷಣೆ ಮಾಡಬೇಕು, ಕೊಬ್ಬರಿ ಬೆಲೆ ಏರಿಕೆ ಮಾಡಲು ಹೊಸ ಸರ್ಕಾರ ಕೂಡಲೇ ಸ್ಪಂದಿಸಿ ಕ್ರಮ ವಹಿಸಬೇಕು. ರೈತರ ಬದುಕು ಮುಖ್ಯ, ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಿ ತಿರ್ಮಾನ ತೆಗೆದುಕೊಳ್ಳಬೇಕು. ತಮಿಳುನಾಡಿಗೆ ನೀರು ಬಿಡುವ ಮೊದಲು ನಮ್ಮ ರೈತರ ರಕ್ಷಣೆ ಮಾಡಬೇಕು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗಿಯಾಗಿದ್ದರು.