ಮನೆ ಪೌರಾಣಿಕ ಶ್ರೀ ವಿಷ್ಣು ಪುರಾಣ

ಶ್ರೀ ವಿಷ್ಣು ಪುರಾಣ

ಭಾಗ-೧: ಮೈತ್ರೇಯ ಪರಾಶರರ ಸಂವಾದ

0

ಶ್ಲೋಕ :-  ನಾರಾಯಣಂ ನಮಸ್ಕೃತ್ಯಂ ನರಂಚೈವ ನರೋತ್ತಮಂ|

ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್ ||

Join Our Whatsapp Group

ಪರಾಶರ ಮಹರ್ಷಿಯು ಶ್ರೀ ವಿಷ್ಣು ಪುರಾಣವನ್ನು ಪ್ರವಚನ ಮಾಡುವುದಕ್ಕೂ ಮುನ್ನ ನಾರಾಯಣನಿಗೂ, ಹಿರಿಯರಿಗೂ ನಮಸ್ಕರಿಸುತ್ತಾ ಈ ರೀತಿ ಆರಂಭಿಸಿದನು. ಪರಮಾತ್ಮ ಸ್ವರೂಪನಾದ ಶ್ರೀಮನ್ನಾರಾಯಣನಿಗೂ, ನರ ಮಾನವರಲ್ಲಿ ಶ್ರೇಷ್ಠನಾದ ನರನಿಗೂ, ಸಕಲ ವಿದ್ಯೆಗಳಿಗೂ ಮೂಲ ಕಾರಣವಾದ ವಾಗ್ದೇವಿಗೂ, ಸಮಸ್ತ ಪುರಾಣ, ಇತಿಹಾಸ, ವಾಜ್ಞಯ ಉಪದೇಶಿಕನಾದ ವ್ಯಾಸ ಮಹರ್ಷಿಗೂ ನಮಸ್ಕರಿಸಿ ಜಯಂ ಎಂಬ ಅಷ್ಟದಶ ಪುರಾಣಗಳಲ್ಲಿ ಒಂದಾದ ಶ್ರೀ ವಿಷ್ಣು ಪುರಾಣ ಪ್ರವಚನವನ್ನು ಮಾಡುತ್ತಿದ್ದೇನೆ. ಶ್ರೀ ವಿಷ್ಣುವಿನ ವರಪ್ರಸಾದದಿಂದ ನೆಲೆಸಿ ಪ್ರಸಿದ್ಧಿಯಾಗಿರುವ ಪವಿತ್ರ ಪ್ರಾಂತ್ಯ ನೈಮಿಶರಣ್ಯ. ಹಿಂದೆ ಚತುರ್ಮುಖ ಬ್ರಹ್ಮನ ಮುಖ ಪದ್ಮದಿಂದ ಹೊರಬಂದ ಮಂತ್ರ ಸಂಹಿತೆಗಳನ್ನು ಮಧು ಕೈಟಬರು ಅಪಹರಿಸಿದಾಗ ನಾಶವಾಗಿರುವ ವೇದಗಳಲ್ಲಿ ಉಳಿದಿರುವ ನಾಲ್ಕು ವೇದಗಳನ್ನು ಮತ್ತೆ ವಿಷಯಗಳಿಗನುಗುಣವಾಗಿ ವಿಭಜನೆ ಮಾಡಿ  ವೇದವ್ಯಾಸರೆಂದು ಕೀರ್ತಿಯನ್ನು ಪಡೆದ ಶ್ರೀ ಕೃಷ್ಣ ದ್ವೈಪಾಯಾನರ ಹೆತ್ತ ತಂದೆಯಾದ ಪರಾಶರ ಮಹರ್ಷಿ ಉಪದೇಶಿಸಿದ ಶ್ರೀ ವಿಷ್ಣು ಪುರಾಣದಲ್ಲಿನ ಪುಣ್ಯಕ್ಷೇತ್ರ ಈ ನೈಮಿಷಾರಣ್ಯ ಪ್ರದೇಶ.

ಆ ನೈಮಿಶಾರಣ್ಯಾ ತಪೋ ಭೂಮಿಯಲ್ಲಿ ಪರಾಶರ ಮಹರ್ಷಿಗಳು ಮೈತ್ರೇಯನಿಗೆ ಸಕಲ ವೇದಶಾಸ್ತ್ರಗಳನ್ನೆಲ್ಲವನ್ನು ಸಂಕ್ಷಿಪ್ತವಾಗಿ ಬೋಧಿಸಿ ಸದ್ವಿವೇಕವನ್ನು ಪ್ರಸಾದಿಸಿದರು. ಆತನ ಕರುಣೆಯಿಂದ ಮೈತ್ರೇಯನು ಜ್ಞಾನಸಂಪನ್ನನಾಗಿ ಉತ್ತಮ ಶ್ಲೋಕ ಕರ್ತನಾದನು. ಒಮ್ಮೆ ಮೈತ್ರೇಯ ಮಹರ್ಷಿಗಳು ಪ್ರಭಾತ ಸಮಯದಲ್ಲಿ ಕಾಲ ಕೃತ್ಯಗಳನ್ನು ಮುಗಿಸಿ ಸುಖಸೀನನಾಗಿ ಆಚಾರ್ಯರಿಗೆ ವಂದಿಸಿ ಅವರ ಮನಸ್ಸನ್ನು ಪ್ರಸನ್ನ ಮಾಡಿಕೊಂಡು ತನ್ನಲ್ಲಿನ ಸಂದೇಹಗಳನ್ನು ಅವರಿಗೆ ತಿಳಿಯಪಡಿಸಿ ಅವರಿಗರಿ ಅವುಗಳಿಗೆ ಪರಿಹಾರವನ್ನು ಸೂಚಿಸುವಂತೆ ಪರಶಾರರನ್ನು ಬೇಡಿದನು.

ಮೈತ್ರೇಯನು ಗುರುಗಳೇ! ನೀವು ದಯೆ ತೋರಿ ನನಗೆ ಅನುಗ್ರಹಿಸಿದ ವಿದ್ಯೆಗಳನ್ನು ಶ್ರದ್ದೆಯಿಂದ ಅಧ್ಯಯನ ಮಾಡಿ ಅವುಗಳ ಸಾರವನ್ನು ಗ್ರಹಿಸಿದ್ದೇನೆ. ಅನಂತ ಜ್ಞಾನಸಂಪನ್ನನಾದ ಪರಮಾತ್ಮನು ಸಕಾರನಾಗಿ ಅನೇಕ ನಾಮರೂಪಗಳಲ್ಲಿ ಗೋಚರಿಸುತ್ತಿದ್ದಾನೆ. ಅವರಲ್ಲಿ ಯಾರಿಂದ ಸರ್ವಲೋಕಗಳು ಪ್ರವರ್ತಿಸುತ್ತಿವೆ? ಯಾರು ದೇವೆಂದ್ರಾದಿಗಳಿಗೂ ಸಹ ನಾಯಕ ಸ್ಥಾನನಾಗಿದ್ದಾನೆ? ಯಾರನ್ನು ಸೇವಿಸಿ ಉಪಾಸನೆ ಮಾಡಿ ಭಕ್ತರು ತಮ್ಮ ಅಭೀಷ್ಟಗಳನ್ನು ನೆರವೇರಿಸಿಕೊಳ್ಳುತ್ತಿದ್ದಾರೆ? ಯಾರ ಮಹಿಮೆಯನ್ನು ಕೊಂಡಾಡಿದರೆ ಇಹಪರ ಸುಖಗಳು ಸುಲಭವಾಗಿ ಉಂಟಾಗುತ್ತದೆ? ಸಕಲ ಚರಾಚರ ಭೂತ ಪ್ರಪಂಚ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣರಾರು? ಅನೇಕ ಗ್ರಂಥಗಳಲ್ಲಿ ಅನೇಕ ರೀತಿಗಳಲ್ಲಿ ಕಾಣಿಸುವ ಈ ಸಂದೇಹಗಳಿಗೆ ಯಾವ ರೀತಿಯಾಗಿ ಉತ್ತರಗಳನ್ನು ಸಮನ್ವಯಿಸಿಕೊಳ್ಳಬೇಕು? ಪೃಥಿವ್ಯಾದಿ ಪಂಚಭೂತಗಳಿಗೂ ಕಾರಣವೇನು? ಸಪ್ತಸಾಗರಗಳು, ಸಪ್ತ ದ್ವೀಪಗಳು, ಕುಲಪರ್ವತಗಳು ಎಷ್ಟು ವಿಸ್ತಾರವನ್ನು ಹೊಂದಿದೆ? ಗ್ರಹ ತಾರೆಗಳ ಸಂಚಾರ ಕ್ರಮ,ದೇವಾಸುರರ ಜನನ, ಮನ್ವoತರಗಳು, ಯುಗಗಳು, ಕಲ್ಪಗಳು ಇತ್ಯಾದಿಗಳ ಕಾಲಗಣನೆಯು ನೀವು ಯಾವ ರೀತಿಯಾಗಿ ಸಂಭವಿಸಿತು? ಯುಗ ಧರ್ಮಗಳೆಂದರೇನು? ಆ ಯುಗಗಳ ಅಧಿಪತಿಗಳು ಯಾರು? ವೇದಶಾಸ್ತ್ರದಲ್ಲಿ  ಯುಗಗಳ ಪ್ರಮಾಣವೆಷ್ಟು? ವರ್ಣಾಶ್ರಮಗಳು, ಬ್ರಹ್ಮಚರ್ಯಗಳೆಂದರೇನು? ಗುರುಗಳೇ ! ನನ್ನ ಮನಸ್ಸಿನಲ್ಲಿ ಉಂಟಾಗಿರುವ ಸಂಶಯಗಳನ್ನು ತಾವು ದಯೆ ತೋರಿ ನಿವೃತ್ತಿಗೊಳಿಸಬೇಕೆಂದು ಬೇಡಿಕೊಳ್ಳುತ್ತೇನೆ” ಎಂದನು.

ಮೈತ್ರೇಯನ ಪ್ರಶ್ನೆಗಳನ್ನು ಸಾವಧಾನವಾಗಿ ಆಲಿಸಿದ ಪರಾಶರ ಮಹರ್ಷಿಗಳು ತಮ್ಮ ಶಿಷ್ಯನ ಮನಸ್ಸಿನಲ್ಲಿ ಉಂಟಾದ ಸಂದೇಹಗಳು ಗುರು ಶಿಕ್ಷಣವಿಲ್ಲದ ಸಾಮಾನ್ಯರಿಗೂ ತಪ್ಪದೆ ಉಂಟಾಗುತ್ತವೆಂದು, ಅಷ್ಟೇ ಅಲ್ಲದೆ ಮೈತ್ರೇಯನು ತನ್ನ ಸ್ವಂತ ಅನುಭವದಲ್ಲಿ ಗೋಚರಿಸಿದ ಧರ್ಮ ಸೂಕ್ಷ್ಮಗಳನ್ನು ವಿಶದೀಕರಿಸುವಂತೆ ಬೇಡುತ್ತಿದ್ದಾನೆಂದು ಗ್ರಹಿಸಿದರು. ನಂತರ ಪರಾಶರರು ಪ್ರಸನ್ನ ಚಿತ್ತದಿಂದ ತನ್ನ ಮನಸ್ಸನ್ನು ಪರಮಾತ್ಮನಲ್ಲಿ ಕೇಂದ್ರೀಕರಿಸಿ ಶ್ರೀ ಮಹಾವಿಷ್ಣುವನ್ನು ಭಕ್ತಿಯಿಂದ ಸ್ಮರಿಸಿದರು.

ಮುಂದುವರೆಯುತ್ತದೆ…….