ಮಡಿಕೇರಿ: ಪ್ರವಾಸಿಗರೊಬ್ಬರು ಕೊಡಗಿನ ಹಾರಂಗಿ ಜಲಾಶಯದ ಕೆಳಭಾಗದ ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ವೇಳೆ ನೀರಿಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಪ್ರವಾಸಿಗನ ಪತ್ತೆಗಾಗಿ ಗುರುವಾರ ಸಂಜೆಯವರೆಗೂ ಶೋಧ ಕಾರ್ಯಾಚರಣೆ ನಡೆದಿದೆ.
ಬೆಂಗಳೂರಿನಿಂದ ಕೊಡಗಿಗೆ ಪ್ರವಾಸಕ್ಕೆ ತೆರಳಿದ್ದ ಸಂದೀಪ್, ಗೋವಿಂದರಾಜು, ರಾಮ್‌ಕುಮಾರ್ ಮತ್ತು ರಂಜಿತ್ ಅವರು ಇಂದು ಸಂಜೆ ನಾಲ್ವರು ಹಾರಂಗಿ ಸೇತುವೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಈ ವೇಳೆ ವೃತ್ತಿಯಲ್ಲಿ ಟ್ಯಾಟೂ ಕಲಾವಿದರಾಗಿರುವ ಸಂದೀಪ್(46) ಅವರು ಸೇತುವೆಯ ಅಂಚಿನಿಂದ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಜಾರಿ ನೀರಿಗೆ ಬಿದ್ದಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸಂದೀಪ್ ಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದು, ಜಲಾಶಯದಿಂದ ನೀರು ಹೊರಬಿಡುವುದನ್ನು ನಿಲ್ಲಿಸಿದ್ದಾರೆ. ಘಟನೆ ನಡೆದಾಗ ಪ್ರವಾಸಿಗರು ಕುಡಿದ ಅಮಲಿನಲ್ಲಿದ್ದ ಶಂಕೆ ವ್ಯಕ್ತವಾಗಿದೆ.
ದುಬಾರೆಯಿಂದ ತೆಪ್ಪದ ತಂಡಗಳು ಆಗಮಿಸಿದ್ದು, ಶೋಧ ಕಾರ್ಯದಲ್ಲಿ ತೊಡಗಿವೆ ಎಂದು ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ ಪಿ ಗಂಗಾಧರಪ್ಪ ಆರ್ ವಿ ಅವರು ತಿಳಿಸಿದ್ದಾರೆ.
ಘಟನೆ ನಡೆದ ಸೇತುವೆಯನ್ನು ಸ್ಥಳೀಯರು ನಿತ್ಯ ಸಂಚಾರಕ್ಕೆ ಬಳಸುತ್ತಾರೆ. ಹಾರಂಗಿ ಜಲಾಶಯದಿಂದ ಹೊರಹರಿವು 15 ಸಾವಿರ ಕ್ಯೂಸೆಕ್ ಗಿಂತ ಹೆಚ್ಚಾದಾಗ ಮಾತ್ರ ಸೇತುವೆ ಜಲಾವೃತಗೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.
ಘಟನೆ ನಡೆದ ಸಂದರ್ಭದಲ್ಲಿ ಜಲಾಶಯದಿಂದ ಹೊರಹರಿವು 2,000 ಕ್ಯೂಸೆಕ್ ಗಿಂತ ಕಡಿಮೆಯಿತ್ತು ಎಂದು ಹಾರಂಗಿ ಇಇ ಖಚಿತಪಡಿಸಿದ್ದಾರೆ.