ಮನೆ ರಾಷ್ಟ್ರೀಯ ಜ್ಞಾನವಾಪಿ ಮಂದಿರವೋ ಅಥವಾ ಮಸೀದಿಯೋ ?: ಬಿಗಿ ಭದ್ರತೆ ನಡುವೆ ಎಎಸ್ ಐನಿಂದ ಸಮೀಕ್ಷೆ ಆರಂಭ

ಜ್ಞಾನವಾಪಿ ಮಂದಿರವೋ ಅಥವಾ ಮಸೀದಿಯೋ ?: ಬಿಗಿ ಭದ್ರತೆ ನಡುವೆ ಎಎಸ್ ಐನಿಂದ ಸಮೀಕ್ಷೆ ಆರಂಭ

0

ವಾರಣಾಸಿ: ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ತನ್ನ ಸಮೀಕ್ಷೆಯನ್ನು ಶುಕ್ರವಾರ ಪುನರಾರಂಭಿಸಿದೆ.

ವೈಜ್ಞಾನಿಕ ಸಮೀಕ್ಷೆಗೆ ಅಲಹಾಬಾದ್‌ ಹೈಕೋರ್ಟ್‌ ಅನುಮತಿ ನೀಡಿದ ಬೆನ್ನಲ್ಲೇ ಸಮೀಕ್ಷೆ ಆರಂಭಿಸಲಾಗಿದ್ದು, ಮಸೀದಿಗೆ ಭಾರಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಶುಕ್ರವಾರ ಬೆಳಗ್ಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತಂಡವು ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣಕ್ಕೆ ಆಗಮಿಸಿದ್ದು, ಬಿಗಿ ಭದ್ರತೆಯ ನಡುವೆ ಸುಮಾರು 7 ಗಂಟೆಗೆ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆ ಪ್ರಾರಂಭವಾಯಿತು.

ಎಎಸ್‌ ಐ ಸಮೀಕ್ಷೆ ಆರಂಭವಾದಾಗ ಜಿಲ್ಲಾಡಳಿತದಿಂದ ನೇಮಕಗೊಂಡವರು ಮಾತ್ರ ಆವರಣದಲ್ಲಿ ಹಾಜರಿದ್ದರು. ಇದೇ ವೇಳೆ ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿ ಸದಸ್ಯರು ಸಮೀಕ್ಷೆಯನ್ನು ಬಹಿಷ್ಕರಿಸಿದರು.

ಹಿಂದಿನ ಸಮೀಕ್ಷೆಯ ಸಮಯದಲ್ಲಿ ಶಿವ ಮತ್ತು ಪಾರ್ವತಿಯ ಶಿಲ್ಪಗಳು, ವರಾಹ (ವಿಷ್ಣುವಿನ ಹಂದಿ ಅವತಾರ), ಗಂಟೆಗಳು, ತ್ರಿಶೂಲಗಳು ಮತ್ತು ಇತರ ಹಲವು ಪುರಾವೆಗಳು ಸೇರಿದಂತೆ ಹಲವಾರು ಕಲಾಕೃತಿಗಳು ಆವರಣದಲ್ಲಿ ಕಂಡುಬಂದಿವೆ ಎಂದು ಸೋಹನ್‌ಲಾಲ್ ಆರ್ಯ ಹೇಳಿದ್ದಾರೆ.

ಇನ್ನು ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಅಲಹಾಬಾದ್‌ ಹೈಕೋರ್ಟ್‌ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಜ್ಞಾನವಾಪಿ ಮಸೀದಿ ಸಮಿತಿಯು ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದು, (ಇಂದೇ) ಶುಕ್ರವಾರವೇ ವಿಚಾರಣೆ ನಡೆಯಲಿದೆ ಎಂದು ಹೇಳಲಾಗಿದೆ.

ಇನ್ನೊಂದೆಡೆ ಗುರುವಾರ ಕೋರ್ಟ್ ಆದೇಶ ಹೊರಬರುತ್ತಿದ್ದಂತೆ ಬಿಜೆಪಿ ನಾಯಕರು ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದು, ಆ ಸ್ಥಳದಲ್ಲಿ ದೇವಾಲಯದ ಬಗ್ಗೆ “ಸತ್ಯ” ಈಗ ಹೊರಬರಲಿದೆ ಎಂದು ಹೇಳಿದ್ದಾರೆ.

ಇದೊಂದು ಉತ್ತಮ ತೀರ್ಪು. ಸತ್ಯ ಯಾವಾಗಲೂ ಹೊರಬರುತ್ತದೆ, ಸಮಯ ತೆಗೆದುಕೊಳ್ಳುತ್ತದೆ ಆದರೆ ಸತ್ಯ ಹೊರಬರುತ್ತದೆ ಎಂದು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ತಿಳಿಸಿದರು.