ಮನೆ ಸ್ಥಳೀಯ ವೀರನಹೊಸಳ್ಳಿಯಿಂದ ಸೆಪ್ಟೆಂಬರ್ ಮೊದಲವಾರ ಗಜಪಯಣ: ಜಿಲ್ಲಾಡಳಿತ ಸಿದ್ಧತೆ

ವೀರನಹೊಸಳ್ಳಿಯಿಂದ ಸೆಪ್ಟೆಂಬರ್ ಮೊದಲವಾರ ಗಜಪಯಣ: ಜಿಲ್ಲಾಡಳಿತ ಸಿದ್ಧತೆ

0
ಸಾಂದರ್ಭಿಕ ಚಿತ್ರ

ಮೈಸೂರು: ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ನಡೆಯುತ್ತಿದೆ. ವೀರನಹೊಸಳ್ಳಿಯಿಂದ ಸೆಪ್ಟೆಂಬರ್ ಮೊದಲ ವಾರದಲ್ಲಿ ಗಜಪಯಣ ಆರಂಭಿಸುವ ಮೂಲಕ ದಸರಾ ಕಾರ್ಯಕ್ರಮಗಳ ಸಿದ್ಧತೆ ಅಧಿಕೃತ ಚಾಲನೆ ದೊರೆಯಲಿದೆ.


ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಆನೆಗಳ ಆಯ್ಕೆ ಪಟ್ಟಿ ಬಹುತೇಕ ಪೂರ್ಣಗೊಂಡಿದೆ. ಈ ಬಾರಿ ಆನೆಗಳ ಆಯ್ಕೆ ಮಾಡುವ ಸಂದರ್ಭದಲ್ಲಿ ವಿವಿಧ ರೀತಿಯ ಪರೀಕ್ಷೆಗಳನ್ನ ನಡೆಸಲಾಗಿದೆ. ಗಜಪಯಣಕ್ಕೆ ಚಾಲನೆ ದೊರೆಯಲಿದೆ. ಮೈಸೂರು ಜಿಲ್ಲಾಡಳಿತ ಸಾಂಪ್ರದಾಯಿಕವಾಗಿ ಗಜಪಡೆಗೆ ಸ್ವಾಗತ ಕೋರಲಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಈಗಾಗಲೇ ಎಲ್ಲಾ ಪ್ರಕ್ರಿಯೆಗೂ ಅರಣ್ಯ ಇಲಾಖೆ ಸಕಲ ರೀತಿಯಲ್ಲೂ ಸಜ್ಜಾಗಿದೆ.
ದಸರಾ ಗಜಪಡೆಗಳಿಗೆ ಪಟಾಕಿ ಸಿಡಿಸಿ ತರಬೇತಿ ನೀಡಲಾಗುತ್ತಿದೆ. ಮೊದಲ ಬಾರಿಗೆ ಆನೆಗಳ ಕ್ಯಾಂಪ್‍ನಲ್ಲೇ ದಸರಾ ಗಜಪಡೆಗೆ ಪಟಾಕಿ ಸಿಡಿಸಿ ಅಭ್ಯಾಸ ಮಾಡಿಸಲಾಗುತ್ತಿದೆ. ಸಿಟಿ ವಾತಾವರಣಕ್ಕೆ ಆನೆಗಳು ಸಜ್ಜುಗೊಳ್ಳಬೇಕಾಗಿದೆ. ಸಿಡಿಮದ್ದು ತಾಲೀಮಿಗೆ ಬೆದರುವ ಸಾಧ್ಯತೆ ಇದೆ. ಹೀಗಾಗಿಯೇ ಪಟಾಕಿ ಸಿಡಿಸಿ ತರಬೇತಿ ನೀಡಲಾಗುತ್ತಿದೆ. ದಸರಾಗಾಗಿ ಕಾಡಿನಿಂದ ನಾಡಿಗೆ ಬರುವ ಗಜಪಡೆ ನಾಡಿನ ಶಬ್ದಕ್ಕೆ ಹೊಂದಿಕೊಳ್ಳಲು ಈ ರೀತಿ ಪಟಾಕಿ ಸಿಡಿಸಿ ಅಭ್ಯಾಸ ಮಾಡಿಸಲಾಗುತ್ತಿದ್ದು, ಜಂಬೂಸವಾರಿ ತರಬೇತಿಗೂ ಇದು ಸಹಕಾರಿಯಾಗಲಿದೆ. ಅಕ್ಟೋಬರ್ 15ರಿಂದ ಆರಂಭವಾಗುವ ನಾಡ ಹಬ್ಬ ದಸರಾಗೆ ಅರಮನೆ ನಗರಿ ಮೈಸೂರಿನಲ್ಲಿ ಭರ್ಜರಿ ಸಿದ್ಧತೆಗಳು ಶುರುವಾಗಿವೆ.
ಒಟ್ಟು 6 ಹೆಣ್ಣಾನೆಗಳನ್ನು ಪ್ರೆಗ್ನೆನ್ಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆಗಾಗಿ ರಕ್ತ, ಮೂತ್ರದ ಮಾದರಿ ದೆಹಲಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. 2- 3 ದಿನಗಳಲ್ಲಿ ಪ್ರೆಗ್ನೆನ್ಸಿ ವರದಿ ಬರುವ ನಿರೀಕ್ಷೆ ಇದೆ. ವರದಿ ಬಂದ ನಂತರ ದಸರಾ ಗಜಪಡೆಯ ಆಯ್ಕೆ ಅಂತಿಮ ಆಗಲಿದೆ. ಅಕ್ಟೋಬರ್ 15ರ ಬೆಳಿಗ್ಗೆ 10.15ರಿಂದ 10.30ಕ್ಕೆ ಸಲ್ಲುವ ಮಹೂರ್ತದಲ್ಲಿ ದಸರಾ ಉದ್ಘಾಟನೆ ನೆರವೇರಿಸಲಿದೆ. ಈ ಬಾರಿ ಅದ್ಧೂರಿ ದೀಪಾಲಂಕಾರ ಸೇರಿದಂತೆ ವರ್ಣರಂಜಿತ, ಸಾಂಪ್ರದಾಯಿಕ ದಸರಾ ಆಯೋಜನೆಗೆ ಸರ್ಕಾರ ಸಿದ್ಧತೆ ಆರಂಭಿಸಿದೆ.