ಮನೆ ರಾಜ್ಯ ಬೆಂಗಳೂರು: ಕಾನೂನು ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು: ಕಾನೂನು ವಿದ್ಯಾರ್ಥಿ ಆತ್ಮಹತ್ಯೆ

0

ಬೆಂಗಳೂರು: ನಗರದ ಖಾಸಗಿ ಕಾಲೇಜಿನಲ್ಲಿ ಕಾನೂನು ಓದುತ್ತಿದ್ದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.

ಆರ್ಯಕುಮಾರ್ ನಡ್ಡಾ (23) ಮೃತ ವಿದ್ಯಾರ್ಥಿ.

ಕೊಠಡಿಯಲ್ಲಿ ಯಾರು ಇಲ್ಲದಿದ್ದಾಗ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ನೇಹಿತರು ಪಿಜಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆಗಮಿಸಿದ್ದು ಯುಡಿಆರ್ ದಾಖಲಿಸಿದ್ದಾರೆ.

ಹಿಮಾಚಲ ಪ್ರದೇಶ ಮೂಲದ ಆರ್ಯಕುಮಾರ್ ಓದಿನ ಸಲುವಾಗಿ ನಗರಕ್ಕೆ ಬಂದು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಡಿ.ಗ್ರೂಪ್ ಲೇಔಟ್ ಸಮೀಪದ ಶ್ರೀಗಂಧ ಕಾವಲು ಬಡಾವಣೆಯಲ್ಲಿ ಪಿಜಿಯಲ್ಲಿ ನೆಲೆಸಿದ್ದ. ಸಮೀಪದ ಖಾಸಗಿ ಕಾನೂನು ಕಾಲೇಜಿನಲ್ಲಿ 3ನೇ ವರ್ಷದ ಕಾನೂನು ಪದವಿಯಲ್ಲಿ ಓದುತ್ತಿದ್ದ. ಇನ್ನು ಆರ್ಯಕುಮಾರ್​ ಕಳೆದ 10 ವರ್ಷದಿಂದ ತೀವ್ರ ಮೈಗ್ರೇನ್‌ ನಿಂದ ಬಳಲುತ್ತಿದ್ದ. ಮೈಗ್ರೇನ್ ನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅನ್ನಪೂರ್ಣೇಶ್ವರಿ ನಗರ ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.

ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಹಿಮಾಚಲ ಪ್ರದೇಶದಲ್ಲಿ ನೆಲೆಸಿರುವ ಮೃತನ ಕುಟುಂಬಕ್ಕೆ ಮಾಹಿತಿ ನೀಡಿದ್ದು, ನಗರಕ್ಕೆ ಬಂದ ಮೇಲೆ ಮರಣೋತ್ತರ ಪರೀಕ್ಷೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.

ತನಿಖೆ ವೇಳೆ ಸಾವಿಗೆ ಬೇರೆ ಯಾವುದೇ ಕಾರಣ ಪತ್ತೆಯಾಗದ ಕಾರಣ, ಪೊಲೀಸರು ಪ್ರಕರಣವನ್ನು ಆತ್ಮಹತ್ಯೆ ಎಂದು ಪರಿಗಣಿಸಿದ್ದಾರೆ.

ಘಟನೆ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.