ಮನೆ ರಾಜಕೀಯ ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು: ಜಂಟಿ ಕೃಷಿ ನಿರ್ದೇಶಕ, ಶಾಸಕರಿಂದ ಎಸ್ ಪಿಗೆ ಪತ್ರ

ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು: ಜಂಟಿ ಕೃಷಿ ನಿರ್ದೇಶಕ, ಶಾಸಕರಿಂದ ಎಸ್ ಪಿಗೆ ಪತ್ರ

0

ಮಂಡ್ಯ: ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ಕೃಷಿ ಅಧಿಕಾರಿಗಳ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಮಂಡ್ಯ ಜಂಟಿ ಕೃಷಿ ನಿರ್ದೇಶಕ ಅಶೋಕ್ ಮಂಡ್ಯ ಎಸ್ ಪಿ ಗೆ ದೂರು ನೀಡಿದ್ದು, ದುರುದ್ದೇಶದಿಂದ ನಮ್ಮ ಅಧಿಕಾರಿಗಳ ಹೆಸರಲ್ಲಿ ನಕಲಿ ದೂರು ಸಲ್ಲಿಸಿರುವ ಸಾಧ್ಯತೆ ಇದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ‌ ಸಾರಂಶ

13-04-22 ರಿಂದ ಮಂಡ್ಯ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕೃಷಿ ಸಚಿವರು ಸಹಾಯಕ ‌ಕೃಷಿ ನಿರ್ದೇಶಕರಿಂದ ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನ ಪತ್ರ ವೈರಲ್ ಆಗಿದ್ದು, ಅದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಕುರಿತು ತನಿಖೆ ಮಾಡಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ರಾಜ್ಯಪಾಲರಿಗೆ ಸಹಾಯಕ ಕೃಷಿ ನಿರ್ದೇಶಕರು ದೂರು ನೀಡಿಲ್ಲ. ಆ ಸಂಬಂಧ ನಾನು ಖುದ್ದಾಗಿ ವಿಚಾರಿಸಿದ್ದೇನೆ. ಸಚಿವರಾಗಲಿ, ಅಧಿಕಾರಿಗಳಾಗಲಿ ಯಾರು ಹಣಕ್ಕೆ ಬೇಡಿಕೆ ಇಟ್ಟಿಲ್ಲ. ದೂರು ಪ್ರತಿಯಲ್ಲಿನ ಸಹಿಯು‌ ಕೂಡ ನಮ್ಮದಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಅಶೋಕ್ ದೂರಿನಲ್ಲಿ ತಿಳಿಸಿದ್ದಾರೆ.

ದುರುದ್ದೇಶದಿಂದ ರಾಜ್ಯಪಾಲರಿಗೆ ದೂರು ನೀಡಿರುತ್ತಾರೆ. ಈ ರೀತಿ ಅಪಪ್ರಚಾರ ಮಾಡಿ ಇಲಾಖೆಗೆ ಕೆಟ್ಟ ಹೆಸರು ತರುತ್ತಿರುವ ವ್ಯಕ್ತಿಗಳನ್ನ ಪತ್ತೆ ಮಾಡಿ ಕ್ರಮ ತೆಗೆದುಕೊಳ್ಳುವಂತೆ ಮಂಡ್ಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ವಿ ಎಸ್ ದೂರು ನೀಡಿದ್ದಾರೆ.

ಶಾಸಕರಿಂದಲೂ ದೂರು

ಕೃಷಿ ಅಧಿಕಾರಿಯ ಜೊತೆ ಶಾಸಕರಾದ ಗಣಿಗ ರವಿಕುಮಾರ್, ದಿನೇಶ್ ಗೂಳಿಗೌಡ, ರಮೇಶ್ ಬಾಬು ಬಂಡಿಸಿದ್ದೇಗೌಡ, ಮಧು ಜಿ ಮಾದೇಗೌಡ ಅವರಿಂದ ಎಸ್ ಪಿಗೆ ದೂರು ನೀಡಲಾಗಿದ್ದು, ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ.

ತನಿಖೆ ಆರಂಭಿಸಿದ ಪೊಲೀಸರು

ಸಹಾಯಕ ಕೃಷಿ ನಿರ್ದೇಶಕರಿಂದ ರಾಜಭವನಕ್ಕೆ ದೂರು ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಖುದ್ದು ಅಡಿಷನಲ್ ಎಸ್ ಪಿ ತಿಮ್ಮಯ್ಯ ಅವರು ಮಂಡ್ಯ ಕೃಷಿ ಇಲಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಂಟಿ ಕೃಷಿ ನಿರ್ದೇಶಕರ ಕಚೇರಿ, ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿದ್ದು, ಜಂಟಿ ಕೃಷಿ ನಿರ್ದೇಶಕ ಅಶೋಕ್ ಅವರಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡಿದ್ದಾರೆ. ಆ ಬಳಿಕ ಮಂಡ್ಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲೂ ಮಾಹಿತಿ ಪಡೆದಿದ್ದಾರೆ.