ಮನೆ ಅಪರಾಧ ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ: 6 ಕಾರ್ಮಿಕರ ಸಾವು, 12 ಜನರಿಗೆ ಗಾಯ

ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ: 6 ಕಾರ್ಮಿಕರ ಸಾವು, 12 ಜನರಿಗೆ ಗಾಯ

0

ಏಲೂರು(Eluru): ಪೋರಸ್‌ ಎಂಬ ಹೆಸರಿನ ರಾಸಾಯನಿಕ ಕಾರ್ಖಾನೆಯಲ್ಲಿ(Chemical Factory) ಭಾರಿ ಪ್ರಮಾಣದ ಅಗ್ನಿ ಅವಘಡ(Fire Accident) ಸಂಭವಿಸಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ.

ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಮಾಸುನೂರು ವಲಯದ ಅಕ್ಕಿರೆಡ್ಡಿಗುಡೆಂನಲ್ಲಿ ಈ ಧಾರುಣ ಘಟನೆ ಸಂಭವಿಸಿದ್ದು, ಐವರು ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದು, ಮತ್ತೊಬ್ಬರು ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಘಟನೆಯಲ್ಲಿ ಗಾಯಗೊಂಡಿರುವವರನ್ನು ಚಿಕಿತ್ಸೆಗಾಗಿ ನೂಜಿವೀಡು ಆಸ್ಪತ್ರೆಗೆ ರವಾನಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ವಿಜಯವಾಡಕ್ಕೆ ಸ್ಥಳಾಂತರಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.

ದುರ್ಘಟನೆ ಸಂಭವಿಸುವ ಸಂದರ್ಭದಲ್ಲಿ 150 ಮಂದಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು, ಅದೃಷ್ಟವಶಾತ್ ಸಾಕಷ್ಟು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಏಲೂರು ಎಸ್​ಪಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ರ್ಮಾಸ್ಯುಟಿಕಲ್ಸ್ ತಯಾರಿಕೆಯಲ್ಲಿ ಬಳಸುವ ಪುಡಿಯನ್ನು ಪೋರಸ್ ಕಾರ್ಖಾನೆಯಲ್ಲಿ ಉತ್ಪಾದಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ.

ಮೃತರ ಕುಟುಂಬಸ್ಥರಿಗೆ ರೂ,25 ಲಕ್ಷ ಪರಿಹಾರ ಘೋಷಣೆ
ಈ ನಡುವೆ ದುರ್ಘಟನೆಗೆ ತೀವ್ರ ಸಂತಾಪ ಸೂಚಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿಯವರು, ಮೃತರ ಕುಟುಂಬಸ್ಥರಿಗೆ ರೂ.25 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ, ಅಲ್ಲದೆ, ತೀವ್ರವಾಗಿ ಗಾಯಗೊಂಡವರಿಗೆ ರೂ.5 ಲಕ್ಷ ಹಾಗೂ ಸಣ್ಣ ಪುಟ್ಟ ಗಾಯಗಳಾದವರಿಗೆ ರೂ.2 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.