ಮೈಸೂರು(Mysuru): ಇಂದಿನ ಪೀಳಿಗೆಯ ಎಲ್ಲರೂ ಬಾಬಾಸಾಹೇಬ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳನ್ನು ಓದಬೇಕಾದ ಅಗತ್ಯವಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯಪಟ್ಟರು.
ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಶೇಷ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವಜ್ಞಾನಿ ಸಭಾಂಗಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 131ನೇ ವರ್ಷದ ಜಯಂತಿ ಅಂಗವಾಗಿ ‘ಪ್ರಸ್ತುತ ಸಂದರ್ಭ: ಡಾ.ಬಿ.ಆರ್. ಅಂಬೇಡ್ಕರ್’ ವಿಶೇಷ ಉಪನ್ಯಾಸ ಹಾಗೂ ಪಿಎಚ್.ಡಿ. ಪದವೀಧರರು, ಸ್ನಾತಕೋತ್ತರ ಮತ್ತು ಸ್ನಾತಕ ಪದವಿಗಳಲ್ಲಿ ಪ್ರಥಮ ರ್ಯಾಂಕ್ ಪಡೆದವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಆಧುನಿಕೋತ್ತರ ಭಾರತದಲ್ಲಿ ಏಪ್ರಿಲ್ 14 ಮಹತ್ವದ ದಿನವಾಗಿದೆ. ಏಕೆಂದರೆ ಭಾರತಕ್ಕೆ ಪ್ರಜಾಸತ್ತಾತ್ಮಕವಾದ ವ್ಯವಸ್ಥೆಯನ್ನು ಕಟ್ಟಿಕೊಟ್ಟ ಸಂವಿಧಾನದ ನಿರ್ಮಾತೃ ಹುಟ್ಟಿದ ದಿನ, ಅಸ್ಪೃಶ್ಯತೆಯ ಕಳಂಕ ಹಾಗೂ ಅಕ್ಷರ ಜ್ಞಾನವಿಲ್ಲದ ಸಮುದಾಯದಿಂದ ಬಂದಂತಹ ಬಾಬಾಸಾಹೇಬರು ಭಾರತೀಯರಿಗೆ ಸ್ವಾತಂತ್ರ್ಯ, ಸಮಾನತೆ ಸೋದರತ್ವವನ್ನು ನೀಡಿದ ಮಹಾಸುಧಾರಕ. ಇಂದು ಇಡೀ ವಿಶ್ವವೇ ಬಾಬಾಸಾಹೇಬರತ್ತ ಮುಖ ಮಾಡಿದೆ.
ಅಮೆರಿಕಾದ ಅಧ್ಯಕ್ಷರಾಗಿದ್ದ ಬರಾಕ್ ಅವರು ನಮ್ಮ ಸಂಸತ್ತನ್ನು ಉದ್ದೇಶಿಸಿ ಮಾತನಾಡುತ್ತಾ ಬಾಬಾಸಾಹೇಬರ ಸಂವಿಧಾನದ ಪ್ರತಿಯನ್ನು ಭಾರತದಿಂದ ತೆಗೆದುಕೊಂಡು ಹೋಗುತ್ತೇನೆ ಎಂಬ ಹೆಮ್ಮೆಯ ಮಾತುಗಳನ್ನು ಹೇಳಿರುವುದನ್ನು ನಾವು ಯಾರು ಮರೆಯುವಂತಿಲ್ಲ ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಅಂಬೇಡ್ಕರ್ ಕೇಂದ್ರ ಅಂಬೇಡ್ಕರ್ ಅವರ ಚಿಂತನೆಗಳನ್ನು ಜೀವಂತಗೊಳಿಸುವ ಪ್ರಯತ್ನದಲ್ಲಿ ಮುಂದೆ ಸಾಗುತ್ತಿದೆ. ಇದರೊಂದಿಗೆ ಬುದ್ಧ ಅಧ್ಯಯನ ಕೇಂದ್ರವು ಕೂಡ ಕಾರ್ಯಾರಂಭ ಮಾಡಿರುವುದು ನನಗೆ ಸಂತೋಷ ಮತ್ತು ಸಾರ್ಥಕ ಬದುಕನ್ನು ಉಂಟುಮಾಡಿದೆ. ಅಂಬೇಡ್ಕರ್ ಕೇಂದ್ರವು ಶೈಕ್ಷಣಿಕವಾಗಿ ಮತ್ತು ಭೌತಿಕವಾಗಿ ಬೆಳೆಯುತ್ತಿರುವುದು ನನಗೆ ತೃಪ್ತಿ ತಂದಿದೆ. ಅಲ್ಲದೆ ನಮ್ಮ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಬಾಬಾ ಸಾಹೇಬರ ಆಶಯದ ಪ್ರತಿಫಲದಂತೆ ಕಾಣುತ್ತಿದೆ ಎಂದರು.
ದೇಶದ ಔದ್ಯೋಗಿಕ ರಂಗ, ಆರ್ಥಿಕ ರ0ಗ, ಸೇವಾವಲಯ, ಕೃಷಿವಲಯ, ಈ ಎಲ್ಲಾ ವಲಯಗಳಲ್ಲೂ, ಬಾಬಾಸಾಹೇಬರ ಚಿಂತನೆಗಳು ಬಲವಾಗಿ ಅನುಷ್ಠಾನಗೊಳ್ಳಬೇಕಿದೆ. ಇಲ್ಲದಿದ್ದರೆ, ಅಸಮಾನತೆಯ ಜಗತ್ತು ವಿಸ್ತರಣೆಗೊಳ್ಳುತ್ತದೆ. ಈ ಎಚ್ಚರವನ್ನು ಎಷ್ಟುಬೇಗ, ಗ್ರಹಿಸುತ್ತೇವೆಯೋ ಅಷ್ಟುಬೇಗ ಭಾರತಕ್ಕೆ ಒಳ್ಳೆಯದಾಗುತ್ತದೆ ಎಂದರು.