ಮನೆ ರಾಜ್ಯ ಮಂಡ್ಯ: ಹೊಂಬಾಳೆಗೌಡನ ದೊಡ್ಡಿ ಗ್ರಾಮದ ಹೊರವಲಯದಲ್ಲಿ ವಾಮಾಚಾರ

ಮಂಡ್ಯ: ಹೊಂಬಾಳೆಗೌಡನ ದೊಡ್ಡಿ ಗ್ರಾಮದ ಹೊರವಲಯದಲ್ಲಿ ವಾಮಾಚಾರ

0

ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಹೊಂಬಾಳೆಗೌಡನ ದೊಡ್ಡಿ ಗ್ರಾಮದ ಹೊರವಲಯದಲ್ಲಿ ತೆಂಗಿನ ಮಟ್ಟೆಗರಿ ಕಟ್ಟಿ ಗೊಂಬೆ ಇಟ್ಟು ವಾಮಾಚಾರ ನಡೆಸಲಾಗಿದ್ದು, ಇದನ್ನು ಕಂಡ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಹಸಿ ತೆಂಗಿನ ಮಟ್ಟೆ ಗರಿಯಲ್ಲಿ ಸಣ್ಣ ಗುಡಿಸಲು ನಿರ್ಮಿಸಿ, ಸುತ್ತ ದಾರದಿಂದ ದಿಗ್ಬಂದನ ಮಾಡಿ, ಗೊಂಬೆ ಒಂದಕ್ಕೆ ಅರಿಶಿಣ, ಕುಂಕುಮ, ಇಟ್ಟು ಪೂಜೆ ನಡೆಸಲಾಗಿದೆ. ಜೊತಗೆ ಮಾಂಸದ ಊಟದ ಎಡೆ ಇಟ್ಟು,  ಗಂಡಸರ ಬಟ್ಟೆಗಳನ್ನು ಇಟ್ಟು, ಪೂಜೆ ಮಾಡಿ ವಾಮಾಚಾರ ಮಾಡಲಾಗಿದೆ.

ಇದನ್ನು ಕಂಡ ಗ್ರಾಮಸ್ಥರು ಭಯಭೀತರಾಗಿ ರಸ್ತೆಯಲ್ಲಿ ಸಂಚರಿಸುವುದನ್ನು ಬಿಟ್ಟಿದ್ದು, ದೂರದಿಂದಲೇ ತಮ್ಮ ಮೊಬೈಲ್ ಗಳಲ್ಲಿ ಅಲ್ಲಿನ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.

ಹೊಲ ಗದ್ದೆಗಳಿಗೆ ಹೋಗಲು ಸಹ ರೈತರು ಭಯಪಡುತ್ತಿದ್ದಾರೆ. ರಾತ್ರೋರಾತ್ರಿ ವಾಮಾಚಾರ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇಂಥ ಕೃತ್ಯಗಳು ಗ್ರಾಮದೊಳಗೆ ನಡೆಯದಂತೆ ಸಂಬಂಧ ಪಟ್ಟವರು ಎಚ್ಚರಿಕೆ ಮೂಡಿಸಬೇಕಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.