ಮನೆ Uncategorized ನಾವೂ ಯಾವುದೇ ರೀತಿ ಕಮೀಷನ್ ಆರೋಪ ಮಾಡಿಲ್ಲ: ಸ್ಪಷ್ಟಪಡಿಸಿದ ಬಿಬಿಎಂಪಿ ಗುತ್ತಿಗೆದಾರರ ಸಂಘ

ನಾವೂ ಯಾವುದೇ ರೀತಿ ಕಮೀಷನ್ ಆರೋಪ ಮಾಡಿಲ್ಲ: ಸ್ಪಷ್ಟಪಡಿಸಿದ ಬಿಬಿಎಂಪಿ ಗುತ್ತಿಗೆದಾರರ ಸಂಘ

0

ಬೆಂಗಳೂರು: ಕಮಿಷನ್ ಆರೋಪ ಮಾಡಿರೋದು ಮಧ್ಯವರ್ತಿಗಳು. ನಾವು ಯಾವುದೇ ರೀತಿ ಆರೋಪ ಮಾಡಿಲ್ಲ. ಯಾರೋ ಮಧ್ಯವರ್ತಿಗಳು ಈ ಕೆಲಸ ಮಾಡಿದ್ದಾರೆ ಎಂದು ಬಿಬಿಎಂಪಿ ಗುತ್ತಿಗೆದಾರ ಮಂಜುನಾಥ್​ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸರ್ಕಾರ ತನಿಖೆಗೆ ಆದೇಶ ನೀಡಿದೆ. ಎಸ್ ​​ಐಟಿ ತಂಡದ ಮೂಲಕ ತನಿಖೆಗೆ ಮುಂದಾಗಿದೆ. ಅವತ್ತು ಕೆಲ ಗುತ್ತಿಗೆದಾರರು ಆವೇಶದಿಂದ ನನ್ನ ಜೊತೆ ಕೂಗಾಡಿದರು. ನಾವು ಹೀಗೆ ಇದ್ದರೇ ಬಿಲ್ ಬರಲ್ಲ ಅಂತ ಕೆಲವರು ಈ ರೀತಿ ಹೇಳಿದ್ದಾರೆ. ಆದರೆ ನಾವು ಎಲ್ಲಿಯೂ ಗಲಾಟೆ ಮಾಡದೇ ಬೆಂಗಳೂರಿನ 28 ಜನ ಶಾಸಕರಿಗೆ ಮನವಿ ನೀಡುತ್ತೇವೆ. ಚುನಾವಣೆ ವೇಳೆ ಅವರಿಗಾಗಿ ನಾವು ಕೆಲಸ ಮಾಡಿದ್ದೇವೆ. ಆದರೆ ಇದೀಗ ಅದು ರಾಜಕೀಯ ತಿರುವು ಪಡೆದುಕೊಂಡಿದೆ ಎಂದರು.

ಈ ಘಟನೆಯಿಂದ ನಾವು ಬಿಜೆಪಿ ಪರ ಎಂದು ಚರ್ಚೆಯಾಗಿತ್ತು. ಆದರೆ ನಾವು ಯಾವ ಪಕ್ಷದ ಪರ ಅಲ್ಲ. ನಮ್ಮ ಹಕ್ಕನ್ನು ಕೇಳೋಕೆ ಹೋಗಿದ್ದು ರಾಜಕೀಯ ಬಣ್ಣ ಪಡೆಯಿತು. ಈ ಹಿಂದೆ ಕೆಂಪಣ್ಣ ಅವರು ಬಿಜೆಪಿ ಮೇಲೆ ಕಮಿಷನ್ ಆರೋಪ ಮಾಡಿದರು. ಆಗ ನಾವೂ ಕೂಡ ಅವರ ಬೆಂಬಲಕ್ಕೆ ನಿಂತಿದ್ವಿ. ಆಗ ನಾವೂ ಕಾಂಗ್ರೆಸ್ ಪರ ಇದ್ವಾ? ನಾವು ಯಾರ ಬಳಿಯೂ ಕಮಿಷನ್ ಪ್ರಸ್ತಾಪ ಮಾಡಿಲ್ಲ. ನಮ್ಮ ಕಷ್ಟಗಳನ್ನ ಹೇಳಿಕೊಂಡಿದ್ದೇವೆ. ಯಾರ ಮೇಲೆಯೂ ನಾವು ಆರೋಪ ಮಾಡಿಲ್ಲ ಎಂದು ತಿಳಿಸಿದರು.

ಎಸ್ ಐಟಿ ತನಿಖೆ ತನಿಖೆ ಮಾಡಿದ ಬಳಿಕ ಬಿಲ್ ಕೊಡುತ್ತೇವೆ ಅನ್ನೋದು ಸರಿಯಲ್ಲ. ಈ ನಡೆಗೆ ನಮ್ಮ ಒಪ್ಪಿಗೆ ಇಲ್ಲ. ಉಪಮುಖ್ಯಮಂತ್ರಿಗಳಿಗೆ ಮಾಹಿತಿ ಕೊರತೆ ಇದೆ. ಅಧಿಕಾರಿಗಳು ಸರಿಯಾಗಿ ಮಾಹಿತಿ ಒದಗಿಸುತ್ತಿಲ್ಲ. ಉಪ ಮುಖ್ಯಮಂತ್ರಿಗಳನ್ನ ಭೇಟಿ ಮಾಡುತ್ತೇವೆ. ಅವರು ಏನು ಸಲಹೆ ಕೊಡುತ್ತಾರೆ ನೋಡಬೇಕು. ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಬಳಿಕ ಡೆಡ್ ಲೈನ್ ಕೊಡುತ್ತೇವೆ. ಡೆಡ್ ಲೈನ್ ಮೀರಿದರೇ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.