ಮುಂಬೈ(mumbai): ಗದಗ ಎಕ್ಸ್‌ಪ್ರೆಸ್‌ನ(Gadag Express) ಎಂಜಿನ್ ಡಿಕ್ಕಿ ಹೊಡೆದ ಪರಿಣಾಮ ದಾದರ್-ಪುದುಚೇರಿ ಎಕ್ಸ್‌ಪ್ರೆಸ್‌ನ(Daadar-Puduchery Express) ಮೂರು ಬೋಗಿಗಳು ಹಳಿತಪ್ಪಿವೆ.
ಶುಕ್ರವಾರ ರಾತ್ರಿ ಮುಂಬೈನ ಮಾತುಂಗಾ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದು ಕೇಂದ್ರ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾತ್ರಿ 9.45ರ ಸುಮಾರಿಗೆ ನಡೆದ ಈ ಘಟನೆಯಲ್ಲಿ ಇದುವರೆಗೆ ಯಾರಿಗೂ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ. ಭಾರತದ ಪ್ರಯಾಣಿಕ ರೈಲು ಸೇವೆಗೆ 169 ವರ್ಷ ತುಂಬುವುದಕ್ಕೆ ಒಂದು ದಿನ ಬಾಕಿ ಇರುವಾಗಲೇ ಈ ಘಟನೆ ನಡೆದಿದೆ.
1853ರ ಏಪ್ರಿಲ್ 16 ರಂದು ಮುಂಬೈ ಮತ್ತು ಥಾಣೆ ನಡುವೆ ದೇಶದಲ್ಲಿ ಮೊದಲ ಬಾರಿಗೆ ಪ್ರಯಾಣಿಕ ರೈಲು ಸೇವೆ ಆರಂಭವಾಗಿತ್ತು. ದಾದರ್-ಪುದುಚೇರಿ ಚಾಲುಕ್ಯ ಎಕ್ಸ್‌ಪ್ರೆಸ್ ರೈಲು ಪ್ಲಾಟ್‌ಫಾರ್ಮ್ 7ರ ಮೂಲಕ ದಾದರ್ ನಿಲ್ದಾಣದ ಪ್ರವೇಶಿಸಿತ್ತು. ಅದೇ ಹೊತ್ತಿಗೆ ನಿಲ್ದಾಣದಿಂದ ತೆರಳುತ್ತಿದ್ದ ಗದಗ ಎಕ್ಸ್‌ಪ್ರೆಸ್ ರೈಲು, ಕ್ರಾಸಿಂಗ್ ಬಳಿ ಚಾಲುಕ್ಯ ಎಕ್ಸ್‌ಪ್ರೆಸ್‌ಗೆ ಹಿಂಬದಿಯಿಂದ ಗುದ್ದಿದೆ ಎಂದು ಅಧಿಕಾರಿಗಳು ತಿಳಿಸಿದರು.
‘ಪರಿಸ್ಥಿತಿ ಸರಿಪಡಿಸಲು ಕಾರ್ಯಾಚರಣೆ ನಡೆಯುತ್ತಿದೆ. ಸುರಕ್ಷತೆಯ ಕಾರಣಗಳಿಗಾಗಿ ಸ್ಥಗಿತಗೊಳಿಸಲಾಗಿದ್ದ ರೈಲ್ವೆ ಮಾರ್ಗಗಳನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಶಿವಾಜಿ ಹೇಳಿದರು.