ಮನೆ ರಾಜ್ಯ ದಾಂಡೇಲಿಯಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ : ಓರ್ವನ ಬಂಧನ

ದಾಂಡೇಲಿಯಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ : ಓರ್ವನ ಬಂಧನ

0

ದಾಂಡೇಲಿ: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಯುವಕನೋರ್ವ ಹಲ್ಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ನಗರದ ಲಿಂಕ್ ರಸ್ತೆಯಲ್ಲಿ ನಡೆದಿದೆ.

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಬಳಗದ ಆಶ್ರಯದಲ್ಲಿ ಮಂಗಳವಾರ ಸಂಜೆ ಸಂಗೊಳ್ಳಿ ರಾಯಣ್ಣ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಮೆರವಣಿಗೆಯು ನಗರದ ಕೆ.ಸಿ.ವೃತ್ತದಿಂದ ಲಿಂಕ್ ರಸ್ತೆಗೆ ಬರುತ್ತಿದ್ದಂತೆಯೆ ಲಿಂಕ್ ರಸ್ತೆಯಲ್ಲಿ ಮೆರವಣಿಗೆಗೆ ಭದ್ರತೆಯನ್ನು ಒದಗಿಸುತ್ತಿದ್ದ ಪೊಲೀಸ್ ಸಿಬ್ಬಂದಿ ದೇವಪ್ಪ ಹೊಸಮನಿ ಎಂಬವರ ಮೇಲೆ ಯುವಕನೋರ್ವ ಏಕಾಏಕಿ  ಕೈಯಲ್ಲಿ ಧರಿಸಿದ್ದ ಖಡ್ಗದಿಂದ ಹಲ್ಲೆ ಮಾಡಿದ್ದಾನೆ.

ಈ ಸಂದರ್ಭದಲ್ಲಿ ದೇವಪ್ಪ ಹೊಸಮನಿಯವರ ತಲೆಗೆ ಗಾಯವಾಗಿ ರಕ್ತಸ್ರಾವವಾಗಿದೆ. ಗಾಯಗೊಂಡಿರುವ ದೇವಪ್ಪ ಹೊಸಮನಿನ್ನು ಕೂಡಲೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗಿದ್ದು, ತಲೆಗೆ ಗಾಯವಾಗಿರುವ ಹಿನ್ನಲೆ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ಕರೆದುಕೊಂಡು ಹೋಗಲು ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ.

ಈ ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಹಲ್ಲೆ ಮಾಡಿದ ಯುವಕನನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಹಲ್ಲೆ ಮಾಡಿದ ಯುವಕ ಸ್ಥಳೀಯ ಸಾಯಿನಗರದ ನಿವಾಸಿ ಅಭಿಷೇಕ್ ಎಂದು ತಿಳಿದು ಬಂದಿದ್ದು, ಇದೀಗ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗುತ್ತಿದೆ.

ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಭೀಮಣ್ಣ. ಎಂ. ಸೂರಿ, ಪಿಎಸೈಗಳಾದ ಐ.ಆರ್.ಗಡ್ಡೇಕರ್, ಯಲ್ಲಪ್ಪ ಎಸ್. ಹಾಗೂ ಪೊಲೀಸ್ ಸಿಬ್ಬಂದಿಗಳು ಆಸ್ಪತ್ರೆಗೆ  ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಗರದಲ್ಲಿ ಇದೇ ಮೊದಲ ಬಾರಿಗೆ‌ ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆಯಾಗಿರುವ ಘಟನೆ ನಡೆದಿದೆ ಎನ್ನಲಾಗಿದೆ.

ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.