ಮನೆ ಸ್ಥಳೀಯ ಚಾಮುಂಡಿ ಬೆಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿಕಾನೂನು ಬಾಹಿರ ಚಟುವಟಿಕೆ ನಡೆಸಿದರೆ ದಂಡ: ಅರಣ್ಯ ಇಲಾಖೆ

ಚಾಮುಂಡಿ ಬೆಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿಕಾನೂನು ಬಾಹಿರ ಚಟುವಟಿಕೆ ನಡೆಸಿದರೆ ದಂಡ: ಅರಣ್ಯ ಇಲಾಖೆ

0

ಮೈಸೂರು: ಚಾಮುಂಡಿ ಬೆಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ, ಮದ್ಯಪಾನ ಸೇರಿದಂತೆ ಇತರ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿದರೆ ದಂಡ ವಿಧಿಸಲಾಗುವುದು ಎಂದು ಮೈಸೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಾಮುಂಡಿ ಬೆಟ್ಟ ಮೀಸಲು ಅರಣ್ಯದ ರಕ್ಷಣೆ ಮತ್ತು ಇಲ್ಲಿನ ಜೀವವೈವಿಧ್ಯತೆ ರಕ್ಷಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ.

ನಾಡ ದೇವತೆ ಚಾಮುಂಡಿ ತಾಯಿಯ ದರ್ಶನಕ್ಕೆ ನಿತ್ಯವೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಅವರಲ್ಲಿ ಕೆಲವರು ಅನುಮತಿ ಪಡೆಯದೇ ಅಕ್ರಮವಾಗಿ ಮೀಸಲು ಅರಣ್ಯ ಪ್ರದೇಶದೊಳಗೆ ಅತಿಕ್ರಮ ಪ್ರವೇಶ ಮಾಡುತ್ತಾರೆ. ಅಲ್ಲಿ ಮದ್ಯಪಾನ, ಮೋಜು ಮಸ್ತಿ ಮಾಡಿ, ಖಾಲಿ ಬಾಟಲಿಗಳನ್ನ ಅಲ್ಲಿಯೇ ಬೀಸಾಡಿ ಹೋಗುತ್ತಾರೆ. ಜತೆಗೆ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾಧಿಗಳು ಆಹಾರ ಪೊಟ್ಟಣಗಳು, ಪ್ಲಾಸ್ಟಿಕ್, ತಿಂಡಿ-ತಿನಿಸುಗಳ ಖಾಲಿ ಕವರ್ ​ಗಳನ್ನು ಬೆಟ್ಟದಲ್ಲೇ ಎಸೆದು ಹೋಗುತ್ತಾರೆ. ಇವುಗಳು ಕಾಳ್ಗಿಚ್ಚಿಗೂ ಹೆಚ್ಚಿನ ಮಟ್ಟದಲ್ಲಿ ಕಾರಣವಾಗುತ್ತಿದೆ. ಅಲ್ಲಿನ ಜೀವ ಸಂಕುಲಕ್ಕೂ ಇದು ಮಾರಕವಾಗಿದೆ.

ಈ ಪ್ಲಾಸ್ಟಿಕ್ ವಸ್ತುಗಳು ಹೆಚ್ಚು ಬೆಂಕಿಯನ್ನು ಸೂಸುವ ತೀವ್ರತೆ ಹೊಂದಿರುವುದರಿಂದ ಕಾಳ್ಗಿಚ್ಚು ಸಂಭವಿಸಿದರೆ, ಅದನ್ನು ನಂದಿಸುವುದು ಕಷ್ಟಸಾಧ್ಯವಾಗಿರುತ್ತದೆ. ಈ ಪ್ಲಾಸ್ಟಿಕ್ ತ್ಯಾಜ್ಯ ಅಲ್ಲಿನ ಜೀವಸಂಕುಲದ ಅರೋಗ್ಯದ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತದೆ. ಇದು ಸುಲಭವಾಗಿ ಕೊಳೆಯದ ಪದಾರ್ಥವಾದ್ದರಿಂದ ಇದು ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಈ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣ ಮಾಡಲು ಅರಣ್ಯ ಇಲಾಖೆ ಈಗ ಹೊಸ ಆದೇಶವೊಂದನ್ನು ಹೊರಡಿಸಿದೆ.

ಚಾಮುಂಡಿ ಬೆಟ್ಟ ಮೀಸಲು ಅರಣ್ಯದಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಿಸಲು ಹಾಗೂ ಅರಣ್ಯ ಸಂರಕ್ಷಿಸುವ ಸಲುವಾಗಿ ಅರಣ್ಯ ಕಾಯ್ದೆ 1963 ಸೆಕ್ಷನ್ 76 ಹಾಗೂ 99(1) ರಂತೆ ಮತ್ತು ಕರ್ನಾಟಕ ಅರಣ್ಯ ನಿಯಮಗಳು 1969 ನಿಯಮ 69ರ ಅಡಿ ಅರಣ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರ ಪ್ರದತ್ತ ಮಾಡಿರುವ ಅಧಿಕಾರದ ಅಡಿ ಮೈಸೂರು ವಿಭಾಗದ ಅರಣ್ಯಾಧಿಕಾರಿಗಳಿಗೆ ಮೀಸಲು ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಂದ ಅರಣ್ಯವನ್ನು ರಕ್ಷಿಸುವ ಉದ್ದೇಶದಿಂದ ದಿನಾಂಕ 1/09/2023ರಿಂದ ಅನ್ವಯವಾಗುವಂತೆ ಅಕ್ರಮ ಚಟುವಟಿಕೆಗಳ ಮೇಲೆ ದಂಡ ವಿಧಿಸುವಂತೆ ಆದೇಶ ಹೊರಡಿಸಲಾಗಿದೆ.

ದಂಡದ ವಿವರ

ಚಾಮುಂಡಿ ಬೆಟ್ಟ ಮೀಸಲು ಅರಣ್ಯಕ್ಕೆ ಅತಿಕ್ರಮ ಪ್ರವೇಶ ಮಾಡಿದರೆ 500ರೂ. ದಂಡ.

ನಿಲುಗಡೆಗೆ ಅನುಮತಿ ಇಲ್ಲದ ಪ್ರದೇಶಗಳಲ್ಲಿ ವಾಹನ ನಿಲುಗಡೆ ಮಾಡಿದರೆ ಸಾವಿರ ರೂ. ದಂಡ.

ಭಕ್ತಾದಿಗಳು/ ಪ್ರವಾಸಿಗರು/ ತಿಂಡಿ ತಿನಿಸುಗಳ ಪ್ಯಾಕೆಟ್ ಮತ್ತು ಇತರ ಪ್ಲಾಸ್ಟಿಕ್ ವಸ್ತುಗಳನ್ನು ಅರಣ್ಯ ಪ್ರದೇಶದಲ್ಲಿ ಬಿಸಾಡಿದರೆ 500 ರೂ.ದಂಡ.

ಚಾಮುಂಡಿ ಬೆಟ್ಟದಲ್ಲಿ ಇರುವ ಅಂಗಡಿ ಮಾಲೀಕರು ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಿದರೆ ಮೊದಲ ಬಾರಿ 2,500 ರೂ ದಂಡ, 2ನೇ ಬಾರಿಗೆ 5 ಸಾವಿರ, ಎರಡಕ್ಕಿಂತ ಹೆಚ್ಚು ಬಾರಿಗೆ ಬಿಸಾಡಿದರೆ 10 ಸಾವಿರ ರೂ. ದಂಡ ವಿಧಿಸಲಾಗುವುದು.

ಜೊತೆಗೆ ಮಾಲೀಕರ ಪರವಾನಗಿ ಸಹ ರದ್ದುಗೊಳಿಸಲು ಶಿಫಾರಸು ಮಾಡಲಾಗುವುದು.

ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಬೆಟ್ಟದ ನಿವಾಸಿಗಳನ್ನು ಬಿಟ್ಟು ಹೊರಗಡೆಯಿಂದ ಅನಧಿಕೃತವಾಗಿ ಭೇಟಿ ನೀಡಿದರೆ 2,500 ರೂ.ದಂಡ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.