ಕಿರುತೆರೆ ನಟ ಕಿರಣ್ ರಾಜ್ ಶೀಘ್ರದಲ್ಲಿಯೇ “ರಾನಿ’ಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈಗಾಗಲೇ ಕಿರಣ್ ರಾಜ್ ಅಭಿನಯದ “ರಾನಿ’ ಸಿನಿಮಾದ ಟೈಟಲ್, ಫಸ್ಟ್‌ಲುಕ್, ಟೀಸರ್ ಮತ್ತು ಪೋಸ್ಟರ್ ಬಿಡುಗಡೆಯಾಗಿದ್ದು, ಮೊದಲ ಬಾರಿಗೆ ಔಟ್ ಆ್ಯಂಡ್ ಔಟ್ ಮಾಸ್ ಲುಕ್‌ನಲ್ಲಿ ಕಿರಣ್ ರಾಜ್ ಪ್ರೇಕ್ಷಕರ ಮುಂದೆ ಬರುವ ಸುಳಿವು ಕೊಟ್ಟಿದ್ದಾರೆ. ಈಗ ಚಿತ್ರತಂಡದಿಂದ ಮತ್ತೂಂದು ಅಪ್‌ಡೇಟ್ ಹೊರಬಿದ್ದಿದೆ. ಚಿತ್ರದ ಆಡಿಯೋ ಹಕ್ಕನ್ನು ಪ್ರತಿಷ್ಠಿತ ಟಿ-ಸೀರಿಸ್ ಸಂಸ್ಥೆ ದೊಡ್ಡ ಮೊತ್ತಕ್ಕೆ ಪಡೆದುಕೊಂಡಿದೆ.
ಮಣಿಕಾಂತ್ ಕದ್ರಿ ಸಂಗೀತ ಚಿತ್ರಕ್ಕಿದ್ದು, ಪ್ರಮೋದ್ ಮರವಂತೆ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಖ್ಯಾತ ಗಾಯಕರು ಹಾಡುಗಳಿಗೆ ಧ್ವನಿಯಾಗಿದ್ದಾರೆ.
“ಇದೊಂದು ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಆ್ಯಕ್ಷನ್ ಶೈಲಿಯ ಸಿನಿಮಾ. ಇದೊಂದು ಗ್ಯಾಂಗ್‌ಸ್ಟರ್ ಹಿನ್ನೆಲೆಯ ಸಿನಿಮಾವದರೂ ಕುಟುಂಬ ಸಮೇತ ನೋಡುವಂತಹ ಭಾವನಾತ್ಮಕ ವಿಷಯಗಳಿವೆ’ ಎನ್ನುತ್ತಾರೆ ಸಿನಿಮಾದ ನಿರ್ದೇಶಕ ಗುರುತೇಜ್ ಶೆಟ್ಟಿ.
ಇನ್ನು “ರಾನಿ’ ಸಿನಿಮಾದಲ್ಲಿ ನಾಯಕ ನಟ ಕಿರಣ್ ರಾಜ್ ಅವರೊಂದಿಗೆ ರವಿಶಂಕರ್, ಮೈಕೋ ನಾಗರಾಜ್ , ಉಗ್ರಂ ರವಿ, ಉಗ್ರಂ ಮಂಜು, ಬಿ. ಸುರೇಶ, ಮಂಡ್ಯ ರಮೇಶ್ ನಟಿಸಿದ್ದಾರೆ.














