ಗದಗ: ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಾಟ ಮಾಡುವ ಲಾರಿಯನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದರೂ ಕೇಸ್ ದಾಖಲಿಸಿಕೊಂಡಿಲ್ಲ. ಮಾತ್ರವಲ್ಲದೇ ಎರಡು ದಿನಗಳಿಂದ ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿಯೇ ಲಾರಿ ಇದ್ರೂ ಪರಿಶೀಲನೆಯ ನೆಪದಲ್ಲಿ ಕೇಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸುಮಾರು 26 ಟನ್ ತೂಕದ ಅಕ್ಕಿಯ 520 ಮೂಟೆಗಳನ್ನು, ಆಂದ್ರಪ್ರದೇಶ ಮೂಲದ ವಾಹನ ಸಂಖ್ಯೆ AP- 27 -TY- 2779 ಲಾರಿಯಲ್ಲಿ ಸಾಗಾಟ ಮಾಡಲಾಗುತ್ತಿತ್ತು. ಮುಂಡರಗಿ ಗದಗ ರಸ್ತೆ ಬರದೂರು ಗ್ರಾಮದ ಬಳಿ ಸ್ಥಳೀಯರು ವಾಹನ ತಡೆದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಆಹಾರ ಇಲಾಖೆಯ ಅಧಿಕಾರಿಗಳು ಲಾರಿ ಪರಿಶೀಲನೆ ಮಾಡಿದರೂ ಕೇಸ್ ದಾಖಲಿಸಲು ಮೀನಾಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಲಾರಿಯಲ್ಲಿನ ಅಕ್ಕಿ ಮೂಟೆಗಳನ್ನ ಆಹಾರ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಅಕ್ರಮದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಶಾಮಿಲಾಗಿದ್ದಾರೆ ಎಂದು ಎಂಬ ಆರೋಪ ಕೇಳಿಬಂದಿದ್ದು, ಲಕ್ಷಾಂತರ ರೂ. ಮೌಲ್ಯದ ಕಾಳದಂಧೆಯ ಅಕ್ಕಿ ಸಿಕ್ಕರೂ ಅಧಿಕಾರಿಗಳು ಜಾಣಮೌನ ಪ್ರದರ್ಶಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.