ಮನೆ ರಾಜ್ಯ ನವೀಕರಿಸಬಹುದಾದ ಇಂಧನ ಸಂರಕ್ಷಣೆಗೆ ಕರ್ನಾಟಕ ಬದ್ಧ: ಕ್ರೆಡಲ್

ನವೀಕರಿಸಬಹುದಾದ ಇಂಧನ ಸಂರಕ್ಷಣೆಗೆ ಕರ್ನಾಟಕ ಬದ್ಧ: ಕ್ರೆಡಲ್

0

ಬೆಂಗಳೂರು: “ಸುಸ್ಥಿರ ಇಂಧನದ ಸಂರಕ್ಷಣೆಗಾಗಿ ಕರ್ನಾಟಕ ಕೈಗೊಂಡಿರುವ ಕ್ರಮಗಳು ಅನನ್ಯವಾದವು ಎಂದು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಹೇಳಿದ್ದಾರೆ.

ಒಡಿಶಾದ ಇಂಧನ ಇಲಾಖೆಯ ಸಹಯೋಗದೊಂದಿಗೆ ಇಂಟರ್ನ್ಯಾಷನಲ್ ಫೋರಮ್ ಫಾರ್ ಎನ್ವಿರಾನ್ಮೆಂಟ್, ಸಸ್ಟೈನಬಿಲಿಟಿ & ಟೆಕ್ನಾಲಜಿ (iFOREST) ನಗರದಲ್ಲಿ ಶನಿವಾರ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾಗಿಯಾದ ಅವರು, ” ಈ ಕಾರ್ಯಾಗಾರವು ನವೀಕರಿಸಬಹುದಾದ ಇಂಧನ ಮತ್ತು ಇಂಧನ ಸಂರಕ್ಷಣೆಯಲ್ಲಿ ಕರ್ನಾಟಕದ ಸಾಮರ್ಥ್ಯವನ್ನು ಹೆಚ್ಚಿಸುವ ಸಮಗ್ರ ಮಾರ್ಗಸೂಚಿಯನ್ನು ಒದಗಿಸುತ್ತದೆ,” ಎಂದರು.

“ಕಳೆದೊಂದು ದಶಕದಲ್ಲಿ ಇಂಧನ ದಕ್ಷತೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಬದ್ಧವಾಗಿ, ರಾಜ್ಯವು ಮಹತ್ವದ ಹೆಜ್ಜೆ ಇಟ್ಟಿದೆ. ಈ ಪ್ರಯತ್ನಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕೇಂದ್ರದ ಇಂಧನ ಸಚಿವರು ಈ ಹಿಂದೆ ಎಲ್ಲಾ ರಾಜ್ಯಗಳನ್ನು ಒತ್ತಾಯಿಸಿದ್ದರು. ಸದ್ಯ ನಮ್ಮ ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 35,398 ಮೆಗಾ ವ್ಯಾಟ್‌ನಷ್ಟಿದ್ದು, ಇದು ದೇಶದ ಒಟ್ಟು ಸಾಮರ್ಥ್ಯದ ಸುಮಾರು 10 ಪ್ರತಿಶತದಷ್ಟಾಗುತ್ತದೆ. ಇಂಧನ ದಕ್ಷತೆಯ ರಾಷ್ಟ್ರೀಯ ಗುರಿ ಸಾಧಿಸುವಲ್ಲಿ ರಾಜ್ಯಗಳ ಪಾತ್ರ ಪ್ರಮುಖವಾದುದು” ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಸಮೃದ್ಧವಾಗಿರುವ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳಾದ ಸೌರ, ಪವನ, ಜೀವರಾಶಿ, ಕೋಜೆನರೇಶನ್, ಟೈಡಲ್ ಎನರ್ಜಿ, ತ್ಯಾಜ್ಯದಿಂದ ಇಂಧನ ಉತ್ಪಾದನೆಯಂಥ ಸಂರಕ್ಷಣಾ ಉಪಕ್ರಮಗಳ ಬಗ್ಗೆ ಸಮ್ಮೇಳನದಲ್ಲಿ ಅವರು ವಿವರಿಸಿದರು.

ನವೀಕರಿಸಬಹುದಾದ ಇಂಧನ ವಲಯದ ಭವಿಷ್ಯದ ಯೋಜನೆಗಳಲ್ಲಿ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿಗಳ (REDAs) ಪಾತ್ರವನ್ನು ಹೆಚ್ಚಿಸುವ ಕುರಿತು ಆಯೋಜಿಸಲಾಗಿದ್ದ ಈ ವರ್ಚುವಲ್ ಕಾನ್ಫರೆನ್ಸ್‌ನಲ್ಲಿ ವಿಷಯ ತಜ್ಞರು, ನೀತಿ ನಿರೂಪಕರು, ಉದ್ಯಮದ ಮುಖಂಡರು ಭಾಗವಹಿಸಿದ್ದರು.

2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆ ರಹಿತ ಇಂಧನ ಸಾಮರ್ಥ್ಯ ಸಾಧಿಸುವುದು, ನವೀಕರಿಸಬಹುದಾದ ಮೂಲಗಳ ಮೂಲಕ 50 ಪ್ರತಿಶತದಷ್ಟು ಇಂಧನ ಅವಶ್ಯಕತೆ ಪೂರೈಸುವುದು ಮತ್ತು ಇಂಗಾಲದ ಹೊರಸೂಸುವಿಕೆಯಲ್ಲಿ ಗಮನಾರ್ಹ ಕಡಿತವನ್ನು ಸಾಧಿಸುವುದು ಸೇರಿದಂತೆ ಇಂಧನ ದಕ್ಷತೆಗೆ ಕೈಗೊಳ್ಳಬಹುದಾದದ ಕ್ರಮಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಾಯಿತು.