ಮನೆ ರಾಜ್ಯ ಹನೂರು: ನಿಧಿ ಆಸೆಗೆ ಮನೆಯಲ್ಲಿ ಗುಂಡಿ ತೆಗೆಸಿದ ಒಡತಿ

ಹನೂರು: ನಿಧಿ ಆಸೆಗೆ ಮನೆಯಲ್ಲಿ ಗುಂಡಿ ತೆಗೆಸಿದ ಒಡತಿ

0

ಹನೂರು: ತಾಲೂಕಿನ ಒಡೆಯರಪಾಳ್ಯ ಸಮೀಪದ ವಿ.ಎಸ್. ದೊಡ್ಡಿ ಗ್ರಾಮದ ಮನೆ ಯೊಂದರಲ್ಲಿ ನಿಧಿ ಆಸೆಗೋಸ್ಕರ ಗುಂಡಿ ತೆಗೆಯುತ್ತಿದ್ದ ಪ್ರಕರಣ ಭಾನುವಾರ ರಾತ್ರಿ ಬೆಳಕಿಗೆ ಬಂದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ಘಟನೆ ವಿವರ: ವಿ.ಎಸ್. ದೊಡ್ಡಿ ಗ್ರಾಮದ ಭಾಗ್ಯಾ ಎಂಬುವರು ನಾಲೈದು ವರ್ಷದ ಹಿಂದೆ ವಾಸ್ತು ಸರಿಯಿಲ್ಲ ವೆಂದು ಮನೆಯನ್ನು ತೊರೆದು ಬೆಂಗಳೂರಿನಲ್ಲಿ ನೆಲೆಸಿದ್ದರು. ಈ ವೇಳೆ ಸಂಬಂಧಿಕ ಪರಶಿವ ಎಂಬುವರು ಭಾಗ್ಯಾ ಅವರನ್ನು ಸ್ಥಳೀಯ ಜೋತಿಷಿಯೊಬ್ಬರ ಬಳಿ ಕರೆದು ಕೊಂಡು ಹೋಗಿ ಶಾಸ್ತ್ರ ಕೇಳಿಸಿದ್ದರು.

ಮನೆಯಲ್ಲಿ ನಿಧಿ ಇದೆ ಎಂದು ಜೋತಿಷಿ ತಿಳಿಸಿದಾಗ, ಭಾಗ್ಯಾ ಅವರು ನಿಧಿ ಶೋಧನೆಗಾಗಿ ಅನುಮತಿ ನೀಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜೋತಿಷಿ ತನ್ನ ಜತೆಗಾರನೊಂದಿಗೆ ಕಳೆದ ವಾರ ವಿ.ಎಸ್. ದೊಡ್ಡಿಗೆ ಆಗಮಿಸಿ ಭಾಗ್ಯಾ ಅವರ ಸಮ್ಮುಖದಲ್ಲೇ ರಾತ್ರಿ ವೇಳೆ ಮನೆಯಲ್ಲಿ ಕಳಸವಿಟ್ಟು ವಿಶೇಷ ಪೂಜೆ ನೆರವೇರಿಸಿದ. ಯಾರಿಗೂ ತಿಳಿಯದಂತೆ ನಿಧಿಗಾಗಿ ಗುಂಡಿ ತೆಗೆಯುವ ಕಾರ್ಯ ಆರಂಭಿಸಿದ್ದ. 3 ಅಡಿ ಅಗಲ ಹಾಗೂ 20 ಅಡಿ ಆಳದ ಗುಂಡಿ ತೆಗೆಸಿದ್ದ.

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆಗೆ ಆಗಮಿಸಿದ ವೇಳೆ ಜ್ಯೋತಿಷಿ ಹಾಗೂ ಜತೆಗಿದ್ದವನು ಪರಾರಿಯಾಗಿದ್ದಾರೆ. ನಿಧಿಗಾಗಿ ಇಂತಹ ಕಾರ್ಯ ನಡೆಸಬಾರದೆಂದು ಒಡೆಯರಪಾಳ್ಯ ಉಪ ಠಾಣೆ ಪೊಲೀಸರು ಭಾಗ್ಯಾ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇನ್ಸ್‌ ಪೆಕ್ಟರ್ ಶಶಿಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ನಿಧಿ ಆಸೆಗಾಗಿ ಮನೆ ಯಲ್ಲೇ ಗುಂಡಿ ತೆಗೆಸಿರುವುದು ವಿಪರ್ಯಾಸ. ಈ ಸಂಬಂಧ ಸ್ಥಳಕ್ಕೆ ಸಿಬ್ಬಂದಿ ಕಳಿಸಿ ತಪಾಸಣೆ ನಡೆಸಿದ್ದು, ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.