ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ನಟನೆಯ ‘ಕರಟಕ ದಮನಕ’ ಸಿನಿಮಾದ ಶೂಟಿಂಗ್ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ರಾಕ್ ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿದ್ದಾರೆ.
ಇತ್ತೀಚೆಗೆ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿತು. ಈ ವೇಳೆ ಸಿನಿಮಾ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಮಾಹಿತಿ ಹಂಚಿಕೊಂಡರು. ಚಿತ್ರದ ಶೀರ್ಷಿಕೆ ‘ಕರಟಕ ದಮನಕ’ದ ಗುಟ್ಟನ್ನು ರಿವೀಲ್ ಮಾಡಿದರು. ‘ಇದು ಎರಡು ಕುತಂತ್ರಿ ನರಿಗಳ ಹೆಸರು. ಇಬ್ಬರು ಹೆಚ್ಚುಸಲ ಒಟ್ಟಾಗಿ ಕಾಣಿಸಿಕೊಂಡರೆ ‘ಕರಟಕ ದಮನಕ’ ಎಂದು ಕರೆಯಲಾಗುತ್ತದೆ’ ಎಂದರು ಯೋಗರಾಜ್ ಭಟ್.
ಶಿವಣ್ಣ ಹಾಗೂ ಪ್ರಭುದೇವ ಅವರ ಎನರ್ಜಿ ನೋಡಿ ಅವರು ಖುಷಿಪಟ್ಟಿದ್ದಾರೆ. ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಲು ರಾಕ್ ಲೈನ್ ಅವರು ಭರ್ಜರಿ ಹಣ ಹೂಡುತ್ತಿದ್ದಾರೆ.
ವಿ. ಹರಿಕೃಷ್ಣ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಏಳು ಹಾಡುಗಳಿವೆ. ಶಿವರಾಜ್ ಕುಮಾರ್, ಪ್ರಭುದೇವ ಜೊತೆ ನಿಶ್ವಿಕಾ ನಾಯ್ಡು, ಪ್ರಿಯಾ ಆನಂದ್ ನಟಿಸಿದ್ದಾರೆ.
ಮುಖ್ಯಮಂತ್ರಿ ಚಂದ್ರು, ತನಿಕೆಲ್ಲ ಭರಣಿ ಸೇರಿ ಅನೇಕ ಹಿರಿಯ ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
‘ಕರಟಕ ದಮನಕ’ ಚಿತ್ರದಲ್ಲಿ ಮತ್ತೊಂದು ವಿಶೇಷತೆ ಇದೆ. ಈ ಸಿನಿಮಾದಲ್ಲಿ ಯೋಗರಾಜ್ ಭಟ್ ಹಾಗೂ ರಾಕ್ಲೈನ್ ವೆಂಕಟೇಶ್ ಕೂಡ ನಟಿಸಿದ್ದಾರೆ. ಈಗಾಗಲೇ ಶೇ.90ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಹಾಡಿನ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ.
ರಾಕ್ ಲೈನ್ ನಿರ್ಮಾಣ ಸಂಸ್ಥೆಯಲ್ಲಿ ಶಿವರಾಜ್ ಕುಮಾರ್ ಅವರು ಈ ಮೊದಲು ನಟಿಸಿದ್ದರು. ಆದರೆ, ಇತ್ತೀಚೆಗೆ ಇವರಿಗೆ ಒಟ್ಟಾಗಿ ಕೆಲಸ ಮಾಡೋಕೆ ಸಾಧ್ಯವಾಗಿರಲಿಲ್ಲ. ಪ್ರಭುದೇವ ಚಿತ್ರಕ್ಕೆ ಬಂಡವಾಳ ಹೂಡಬೇಕು ಎಂಬುದು ರಾಕ್ ಲೈನ್ ಅವರ ಕನಸಾಗಿತ್ತು. ‘ಕರಟಕ ದಮನಕ’ ಸಿನಿಮಾ ಮೂಲಕ ಈ ಕನಸು ನನಸಾಗಿದೆ. ಪ್ರಭುದೇವ ಜೊತೆ ತೆರೆಹಂಚಿಕೊಂಡಿದ್ದಕ್ಕೆ ಶಿವಣ್ಣ ಖುಷಿಯಾಗಿದ್ದಾರೆ.














