ಮನೆ ಕಾನೂನು ಕ್ರೌರ್ಯದ ಆರೋಪದ ಅಡಿ ಗಂಡನ ಗೆಳತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ: ಕೇರಳ ಹೈಕೋರ್ಟ್

ಕ್ರೌರ್ಯದ ಆರೋಪದ ಅಡಿ ಗಂಡನ ಗೆಳತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ: ಕೇರಳ ಹೈಕೋರ್ಟ್

0

ಕ್ರೌರ್ಯದ ಅರೋಪದ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 498ಎ ಅಡಿ ಗಂಡನ ಗೆಳತಿ ಅಥವಾ ಅವನೊಂದಿಗೆ ವಿವಾಹೇತರ ಲೈಂಗಿಕ ಸಂಬಂಧ ಹೊಂದಿರುವ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ಐಪಿಸಿ ಸೆಕ್ಷನ್ 498ಎ ಪ್ರಕಾರ ಮಹಿಳೆಯ ಮೇಲೆ ಆಕೆಯ ಪತಿ ಅಥವಾ ಗಂಡನ ಸಂಬಂಧಿಕರು ಎಸಗುವ ಕ್ರೌರ್ಯಕ್ಕೆ ಶಿಕ್ಷೆ ವಿಧಿಸಲಾಗುತ್ತದೆ.

ʼಸಂಬಂಧಿ’ ಎಂಬ ಪದ ವಿವಾಹೇತರ ಲೈಂಗಿಕ ಸಂಬಂಧ ಹೊಂದಿರುವ ಮಹಿಳೆಯನ್ನು ಒಳಗೊಂಡಿಲ್ಲ ಎಂದು ಸೆಕ್ಷನ್‌ನಲ್ಲಿ ಬಳಸಲಾದ ಭಾಷೆ ಸ್ಪಷ್ಟಪಡಿಸುತ್ತದೆ ಎಂಬುದಾಗಿ ನ್ಯಾಯಮೂರ್ತಿ ಕೆ ಬಾಬು ತಿಳಿಸಿದರು.

“ಪದದ ವ್ಯುತ್ಪತ್ತಿಯ ಅರ್ಥದಲ್ಲಿ ಪುರುಷನೊಂದಿಗೆ ವಿವಾಹೇತರ ಲೈಂಗಿಕ ಸಂಬಂಧ ಇರಿಸಿಕೊಂಡ ಗೆಳತಿ ಅಥವಾ ಮಹಿಳೆ ಕೂಡ ‘ಸಂಬಂಧಿ’ ಆಗಿರುತ್ತಾರೆ ಎಂದು ಕಲ್ಪನೆಯನ್ನು ಹಿಗ್ಗಿಸಿಕೊಳ್ಳಬೇಕಿಲ್ಲ. ‘ಸಂಬಂಧಿ’ ಎಂಬ ಪದ ತನ್ನ ವ್ಯಾಪ್ತಿಯೊಳಗೆ ಒಂದು ಸ್ಥಾನಮಾನವನ್ನು ನೀಡುತ್ತದೆ. ರಕ್ತ ಸಂಬಂಧದಿಂದಾಗಲೀ ಇಲ್ಲವೇ ಮದುವೆ ಅಥವಾ ದತ್ತು ಸ್ವೀಕಾರದ ಮೂಲಕವಾಗಲೀ ಅಂತಹ ಸ್ಥಿತಿ ಇರಬೇಕು. ಮದುವೆ ಆಗಿರದಿದ್ದರೆ ಒಬ್ಬರು ಇನ್ನೊಬ್ಬರಿಗೆ ಸಂಬಂಧಿ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ನುಡಿದಿದೆ.

ದಂಡದ ನಿಯಮಾವಳಿಯಾಗಿರುವುದರಿಂದ ಸಂದರ್ಭೋಚಿತ ಅರ್ಥ ನೀಡದೆ ಸೆಕ್ಷನ್ 498 ಎ ಕಟ್ಟುನಿಟ್ಟಾದ ಬಂಧಕ್ಕೆ ಅರ್ಹವಾಗಿದೆ ಎಂದು ಅದು ಒತ್ತಿ ಹೇಳಿತು. ಈ ಹಿನ್ನೆಲೆಯಲ್ಲಿ ಅರ್ಜಿದಾರೆಯ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಆಕೆಯ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿತು.