ಮನೆ ಸುದ್ದಿ ಜಾಲ ಕಮೀಷನ್ ಗಾಗಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಸತಾಯಿಸುತ್ತಿರುವ ಮೈಸೂರು ಪಾಲಿಕೆ ಎಂಜಿನಿಯರ್ಸ್

ಕಮೀಷನ್ ಗಾಗಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಸತಾಯಿಸುತ್ತಿರುವ ಮೈಸೂರು ಪಾಲಿಕೆ ಎಂಜಿನಿಯರ್ಸ್

0

ಮೈಸೂರು: ‘ಪಾಲಿಕೆ ಎಂಜಿನಿಯರ್‌ಗಳು ಕಮಿಷನ್‌ಗಾಗಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಸತಾಯಿಸುತ್ತಿದ್ದಾರೆ’ಎಂದು ಪಕ್ಷಬೇಧವಿಲ್ಲದೇ ಪಾಲಿಕೆ ಸದಸ್ಯರು  ಬಜೆಟ್ ಪೂರ್ವ ಸಭೆಯಲ್ಲಿ ಆರೋಪಿಸಿದ್ದಾರೆ.

ಈ ವಿಚಾರದ ಚರ್ಚೆ ತಾರಕಕ್ಕೇರುತ್ತಿದ್ದಂತೆ ಸಿಬ್ಬಂದಿ ಮಾಧ್ಯಮದವರನ್ನು ಹೊರಹೋಗಿ ಎಂದು ಪಿಸುಮಾತಿನಲ್ಲಿ ಹೇಳಿದರು.

ಅದರಿಂದ ಕೆರಳಿದ ಕೆಲವು ಪತ್ರಕರ್ತರು, ‘ಸಭೆಗೆ ಆಹ್ವಾನ ನೀಡಿದ್ದಾದರೂ ಏಕೆ’ ಎಂದು ಏರುಧ್ವನಿಯಲ್ಲಿ ಪ್ರಶ್ನಿಸುತ್ತಿದ್ದಂತೆ, ಸದಸ್ಯರು ಹಾಗೂ ಅಧಿಕಾರಿಗಳು ಕಮಿಷನ್‌ ದಂಧೆಯ ಚರ್ಚೆಯನ್ನು ಕೈಬಿಟ್ಟು, ಬಜೆಟ್‌ ಕುರಿತ ಚರ್ಚೆಗೆ ಹೊರಳಿದರು!‘ಎಂಜಿನಿಯರ್‌ಗಳು ಕಾರ್ಯಾದೇಶ ನೀಡಲು ಸತಾಯಿಸುತ್ತಿದ್ದಾರೆ. ಅವರಿಗೆ ಕಮಿಷನ್‌ ನೀಡಬೇಕಾ’ ಎಂದು ಕಾಂಗ್ರೆಸ್ ಸದಸ್ಯ ಅಯೂಬ್‌ಖಾನ್‌ ಪ್ರಶ್ನಿಸಿದರು.

ಬಿಜೆಪಿ ಸದಸ್ಯ ಸುಬ್ಬಯ್ಯ ಸಹ ದನಿಗೂಡಿಸಿದರು. ಜೆಡಿಎಸ್‌ ಸದಸ್ಯೆ ಪ್ರೇಮಾ ಶಂಕರೇಗೌಡ ಮಾತನಾಡಿ, ‘ಎಸ್ಟೀಮೇಟ್‌ ಕಡತವೇ ಕಾಣೆಯಾಗಿದೆ ಎನ್ನುತ್ತಾರೆ. ಪಾಲಿಕೆಯಲ್ಲಿ ಕಳ್ಳರು ಸೇರಿಕೊಂಡಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.

ಅಧೀಕ್ಷಕ ಎಂಜಿನಿಯರ್ ಮಹೇಶ್ ಪ್ರತಿಕ್ರಿಯಿಸಿ, ‘ಕಾರ್ಯಾದೇಶ ಕೊಡುವುದು ನನ್ನ ಕೆಲಸ ಅಲ್ಲ’ ಎಂದರು. ಆಗ ಕೆರಳಿದ ಅಯೂಬ್‌ಖಾನ್, ‘ಎಂಜಿನಿಯರ್‌ಗಳು ಕೊಡದೇ ಹೋದರೆ ಜವಾಬ್ದಾರಿ ನೀವಲ್ಲವೇ’ ಎಂದು ಪ್ರಶ್ನಿಸಿದರು.ಮಧ್ಯಪ್ರವೇಶಿಸಿದ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ‘ಈ ಕುರಿತು 2 ದಿನಗಳ ಒಳಗೆ ಸಭೆ ನಡೆಸಲಾಗುವುದು’ ಎಂದರು.

ತೋಟಗಾರಿಕಾ ಶಾಖೆಯನ್ನೇ ಮುಚ್ಚಿದ್ದೀರಿ, ಉದ್ಯಾನದಲ್ಲಿ ಕಸ ಗುಡಿಸುವವರೇ ಇಲ್ಲ ಎಂದು ಮ.ವಿ.ರಾಮಪ್ರಸಾದ್ ವಿಷಯ ಪ್ರಸ್ತಾಪಿಸಿದರು.‘ನಗರದಲ್ಲಿ 529 ಉದ್ಯಾನಗಳಿದ್ದು, ಸ್ವಚ್ಛತೆ ಕೇವಲ 50 ಮಂದಿ ಇದ್ದಾರೆ. ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು’ ಎಂದು ಆಯುಕ್ತ ಲಕ್ಷ್ಮಿಕಾಂತರೆಡ್ಡಿ ತಿಳಿಸಿದರು.