ಮನೆ ರಾಜ್ಯ ಲೋಗೋ ಸಹಿತ ವಸತಿ ಯೋಜನೆಗಳ ಮಾಹಿತಿ ಫಲಕ ಅಳವಡಿಸಲು ಜಮೀರ್ ಅಹಮದ್ ಸೂಚನೆ

ಲೋಗೋ ಸಹಿತ ವಸತಿ ಯೋಜನೆಗಳ ಮಾಹಿತಿ ಫಲಕ ಅಳವಡಿಸಲು ಜಮೀರ್ ಅಹಮದ್ ಸೂಚನೆ

0

ಬೆಂಗಳೂರು :ವಸತಿ ಇಲಾಖೆ ವ್ಯಾಪ್ತಿಯ ಗೃಹ ಮಂಡಳಿ, ರಾಜೀವ್ ಗಾಂಧಿ ವಸತಿ ನಿಗಮ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬಡವರಿಗೆ ನೀಡುವ ಮನೆ ಅಥವಾ ಪ್ಲಾಟ್ ಮುಂದೆ ಆಯಾ ಮಂಡಳಿ -ನಿಗಮದ ಲೋಗೋ ಸಹಿತ ಯೋಜನೆಯ ವಿವರದ ಫಲಕ ಹಾಕುವಂತೆ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಗುರುವಾರ ಕೊಳೆಗೇರಿ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾವ ಯೋಜನೆ ಯಡಿ ಯಾವ ವರ್ಷದಲ್ಲಿ ಯಾರಿಗೆ ಹಂಚಿಕೆ ಆಗಿದೆ ಎಂಎಂಬುದರ ಬಗ್ಗೆ ಫಲಾನುಭವಿ ಹೆಸರು ಸಹಿತ ಫಲಕ ಹಾಕಬೇಕು. ಮಂಡಳಿ -ನಿಗಮದ ಲೋಗೋ ಸಹ ಇರಬೇಕು ಎಂದು ಸೂಚಿಸಿದರು.

ರಾಜ್ಯದಲ್ಲಿ ವಸತಿ ಇಲಾಖೆ ಯಿಂದ ಬಡವರಿಗೆ ನೀಡುವ ಮನೆ ಅಥವಾ ಪ್ಲಾಟ್ ಸ್ಪಷ್ಟ ವಾಗಿ ಗುರುತಿಸಲು ಅನುಕೂಲ ಆಗುವಂತೆ ಶಾಶ್ವತ ಫಲಕ ಅಳವಡಿಸಬೇಕು.  ಎಷ್ಟು ಕುಟುಂಬಗಳಿಗೆ ಎಲ್ಲೆಲ್ಲಿ ಯಾವ ಯೋಜನೆಯಡಿಯಲ್ಲಿ ಸೂರು ಕಲ್ಪಿಸಲಾಗಿದೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.

ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರಾಜ್ಯದಲ್ಲಿ ಕೈಗೊಂಡಿರುವ ಯೋಜನೆ, ಹಂಚಿಕೆ ಆಗಿರುವ ಮನೆ, ಪ್ರಗತಿ ಯಲ್ಲಿರುವ ಯೋಜನೆಗಳ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೊಳೆಗೇರಿ ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ವಾದ ಹಣಕಾಸು,  ಬಜೆಟ್ ನಲ್ಲಿ ನೀಡಿರುವ ಅನುದಾನ, ಬೇಕಾಗಿರುವ ಹೆಚ್ಚುವರಿ ಮೊತ್ತ ಬಗ್ಗೆಯೂ ಮಾಹಿತಿ ಪಡೆದು ಹೆಚ್ಚಿನ ಅನುದಾನಕ್ಕಾಗಿ ಮುಖ್ಯಮಂತ್ರಿ ಯವರ ಜತೆ ಚರ್ಚಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಮನಗರ, ಚನ್ನಪಟ್ಟಣ, ಮಾಗಡಿ, ಕುಣಿಗಲ್ ವಿಧಾನಸಭೆ ಕ್ಷೇತ್ರಗಳಲ್ಲಿ ವಸತಿ ಯೋಜನೆಗಳ ಕುರಿತು ಸಂಸದ ಡಿ. ಕೆ. ಸುರೇಶ್, ಶಾಸಕರಾದ ಬಾಲಕೃಷ್ಣ, ಇಕ್ಬಾಲ್ ಹುಸೇನ್, ರಂಗನಾಥ್ ಸಮ್ಮುಖದಲ್ಲಿ ಅಧಿಕಾರಿಗಳ ಜತೆ ಸಚಿವರು ಸಭೆ ನಡೆಸಿದರು.

ವಸತಿ ಯೋಜನೆಗಳ ಅನುಷ್ಠಾನ ಕ್ಕೆ ಎದುರಾಗಿರುವ ಅಡೆ ತಡೆ ನಿವಾರಣೆಗೆ ಸೂಚನೆ ನೀಡಿದರು.

ಸೂರ್ಯನಗರ ನಾಲ್ಕನೇ ಹಂತದ ಬಡಾವಣೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಕ್ರೀಡಾಂಗಣ ಮತ್ತು ಮಾದರಿ ಶಾಲೆ ನಿರ್ಮಾಣದ ಪ್ರಸ್ತಾವನೆಯ ಮುಂದಿನ ಪ್ರಕ್ರಿಯೆ ಬಗ್ಗೆಯೂ ಇದೇ ವೇಳೆ ಅಧಿಕಾರಿಗಳ ಜತೆ ಚರ್ಚಿಸಲಾಯಿತು.

ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ವೆಂಕಟೇಶ್, ಪ್ರಧಾನ ಅಭಿಯಂತರ ಬಾಲರಾಜು, ಗೃಹ ಮಂಡಳಿ ಆಯುಕ್ತರಾದ ಕವಿತಾ ಮನ್ನಿಕೇರಿ, ಪ್ರಧಾನ ಅಭಿಯಂತರ ಶರಣಪ್ಪ, ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ಉಪಸ್ಥಿತರಿದ್ದರು.