ಮನೆ ಕಾನೂನು ‘ಶಕ್ತಿ’ ಯೋಜನೆ ಪ್ರಶ್ನಿಸಿದ್ದ ಅರ್ಜಿದಾರರಿಗೆ ಹೈಕೋರ್ಟ್‌ ತರಾಟೆ

‘ಶಕ್ತಿ’ ಯೋಜನೆ ಪ್ರಶ್ನಿಸಿದ್ದ ಅರ್ಜಿದಾರರಿಗೆ ಹೈಕೋರ್ಟ್‌ ತರಾಟೆ

0

“ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುವ ಶಕ್ತಿ ಯೋಜನೆಗೆ ಮೊದಲು ಸಂಚಾರ ಸುಗಮವಾಗಿತ್ತಾ? ಯೋಜನೆಯಿಂದಾಗಿಯೇ ಬಸ್‌ ಗಳಲ್ಲಿ ದಟ್ಟಣೆ ಉಂಟಾಗಿದೆಯೇ?” ಹೀಗೆಂದು ಶಕ್ತಿ ಯೋಜನೆ ಬಗ್ಗೆ ಆಕ್ಷೇಪಿಸಿದ್ದ ಅರ್ಜಿದಾರರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ಪ್ರಶ್ನಿಸಿತು.

ಬೆಂಗಳೂರಿನ ವಿವಿಧ ಕಾನೂನು ಕಾಲೇಜುಗಳ ಕಾನೂನು ವಿದ್ಯಾರ್ಥಿಗಳಾದ ಅಶ್ವಿನ್ ಶಂಕರ್ ಭಟ್, ನೇಹಾ ವೆಂಕಟೇಶ್ ಮತ್ತು ಯಾಶಿಕಾ ಸರವಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

“ಶಕ್ತಿ ಯೋಜನೆಗೆ ಮೊದಲು ಸಂಚಾರ ಸುಗಮವಾಗಿತ್ತಾ? ಯೋಜನೆಯಿಂದಾಗಿಯೇ ಬಸ್‌ಗಳಲ್ಲಿ ದಟ್ಟಣೆ ಉಂಟಾಗಿದೆಯೇ? ಯಾವ ರೂಟ್‌ಗಳಲ್ಲಿ (ಮಾರ್ಗ) ಪ್ರಯಾಣಿಕರ ದಟ್ಟಣೆ ಇದೆ? ಸಾರ್ವಜನಿಕ ಬಸ್‌ ಗಳಲ್ಲಿ ಇಷ್ಟೇ ಜನರಿರಬೇಕು ಎಂಬ ನಿಯಮವಿದೆಯೇ? ಅರ್ಜಿ ಸಲ್ಲಿಸುವ ಮೊದಲು ಸಾರಿಗೆ ನಿಯಮಗಳನ್ನು ಅಧ್ಯಯನ ನಡೆಸಿಲ್ಲವೇಕೆ? ಯೋಜನೆಯು ದುರ್ಬಲ ವರ್ಗಗಳಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿದೆಯಲ್ಲವೇ? ಮುಂಬೈ ಲೋಕಲ್ ರೈಲುಗಳ ದಟ್ಟಣೆಯ ಬಗ್ಗೆ ನಿಮಗೆ ಅರಿವಿದೆಯೇ?” ಎಂದು ಪೀಠ ಅರ್ಜಿದಾರರನ್ನು ಪ್ರಶ್ನಿಸಿತು. ಯೋಜನೆಯಿಂದ ಆರ್ಥಿಕ ಸಂಕಷ್ಟದ ಜೊತೆಗೆ ದಿನನಿತ್ಯ ಆವಾಂತರಗಳು ಸೃಷ್ಟಿಯಾಗುತ್ತಿವೆ ಎನ್ನುವುದು ಅರ್ಜಿದಾರರ ಆಕ್ಷೇಪವಾಗಿತ್ತು.

ಕೊನೆಗೆ ಸೂಕ್ತ ಅಧ್ಯಯನ ಮತ್ತು ಸಿದ್ದತೆಯೊಂದಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದು ಎಂದು ಸಲಹೆ ನೀಡಿದ ಪೀಠವು ಅರ್ಜಿಯನ್ನು ಹಿಂಪಡೆಯಲು ಅರ್ಜಿದಾರರಿಗೆ ಅನುಮತಿ ನೀಡಿತು.

ಅರ್ಜಿಯಲ್ಲಿ ಏನಿತ್ತು: ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬಸ್‌ ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಬಸ್‌ ಗಳಲ್ಲಿ ಸೀಟು ಪಡೆದುಕೊಳ್ಳಲು ಗಲಾಟೆ, ಹೊಡೆದಾಟ ಸಂಭವಿಸಿದ ಘಟನೆಗಳು ನಡೆದಿವೆ. ಹಿರಿಯ ನಾಗರಿಕರು, ಮಕ್ಕಳು ಬಸ್‌ ಗಳಲ್ಲಿ ಹತ್ತಲು ಆಗುತ್ತಿಲ್ಲ. ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲಾ-ಕಾಲೇಜು ತಲುಪಲು ಆಗುತ್ತಿಲ್ಲ. ಇದರಿಂದಾಗಿ ಬಸ್ ಹಾಗೂ ಬಸ್ ನಿಲ್ದಾಣಗಳಲ್ಲಿ ಅನುಚಿತ ವರ್ತನೆ, ಅಹಿತಕರ ಘಟನೆಗಳು ನಡೆಯುತ್ತಿವೆ. ಬಸ್ ನಿಲ್ದಾಣ ಮತ್ತು ಸರ್ಕಾರಿ ಬಸ್‌ ಗಳು ಯುದ್ಧ ಭೂಮಿ, ಮೀನು ಮಾರುಕಟ್ಟೆಯಂತಾಗಿವೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.

ಯೋಜನೆ ಜಾರಿಗೆ ಬಂದಾಗಿನಿಂದ ಮೂರು ಕೋಟಿ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾಾರೆ. ಇದರಿಂದ ವಾರಕ್ಕೆ 100 ಕೋಟಿ ರೂಪಾಯಿ ತೆರಿಗೆದಾರರ ಹಣ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಈ ಯೋಜನೆಗೆ ವಾರ್ಷಿಕ 3,200 ರಿಂದ 3,400 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ಶಾಲಾ ಮಕ್ಕಳು ಹಿರಿಯ ನಾಗರಿಕರಿಗೆ ಬಸ್ ಹತ್ತಿ-ಇಳಿಯಲು ಸೂಕ್ತ ವ್ಯವಸ್ಥೆ ಮಾಡಬೇಕು. ದೂರದ ಊರುಗಳಿಗೆ ತೆರಳುವ ಬಸ್‌ ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಬಸ್‌ ಗಳಲ್ಲಿ ಹತ್ತಲು ಮೊದಲು ಅವಕಾಶ ಮಾಡಿಕೊಡಬೇಕು. ದೂರದ ಊರುಗಳಿಗೆ ನಿಂತು ಪ್ರಯಾಣಿಸುವುದನ್ನು ನಿಷೇಧಿಸಬೇಕು. ಟಿಕೆಟ್ ಪಡೆದವರಿಗೆ ಶೇ.50ರಷ್ಟು ಸೀಟುಗಳನ್ನು ಮೀಸಲಿಡಬೇಕು. ಕಿಟಿಕಿ ಹಾಗೂ ಚಾಲಕರ ದ್ವಾರದ ಮೂಲಕ ಪ್ರಯಾಣಿಕರು ಹತ್ತುವುದನ್ನು ನಿರ್ಬಂಧಿಸಬೇಕು. ಶಾಲಾ ಮಕ್ಕಳಿಗೆ ವಿಶೇಷ ಬಸ್‌ ಗಳ ವ್ಯವಸ್ಥೆ ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.