ಮನೆ ಕಾನೂನು ಎಸಿ ವಾಹನ, ಚರಾಸ್ತಿ ಮತ್ತು ಪುರಸಭೆ ಕಚೇರಿ ಚರಾಸ್ತಿ ಜಪ್ತಿ

ಎಸಿ ವಾಹನ, ಚರಾಸ್ತಿ ಮತ್ತು ಪುರಸಭೆ ಕಚೇರಿ ಚರಾಸ್ತಿ ಜಪ್ತಿ

0

ಪಾಂಡವಪುರ: ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕಾಗಿ ಒಳಚರಂಡಿ ಮಂಡಳಿ ರೈತರಿಂದ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ಒದಗಿಸಲು ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿ ವಿಫಲರಾದ ಹಿನ್ನೆಲೆಯಲ್ಲಿ ಪಾಂಡವಪುರ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರ ಆದೇಶದಂತೆ ಕೋರ್ಟ್ ಜಮೀನರು ರೈತರ ಸಹಕಾರದೊಂದಿಗೆ ಉಪವಿಭಾಗಾಧಿಕಾರಿಗಳ ವಾಹನ,ಚರಾಸ್ತಿ ಮತ್ತು ಪುರಸಭೆ ಕಚೇರಿ ಚರಾಸ್ತಿಗಳನ್ನೂ ಶುಕ್ರವಾರ ಜಪ್ತಿ ಮಾಡಿದರು.


2006ರಲ್ಲಿ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣ ಘಟಕ ನಿಮಾಣಕ್ಕಾಗಿ ಪಟ್ಟಣದ ಹೊರವಲಯದಲ್ಲಿ ಒಳಚರಂಡಿ ಮಂಡಳಿ ರೈತ ಸತ್ಯನಾರಾಯಣ ಅವರಿಗೆ ಸೇರಿದ 30 ಗುಂಟೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಲು ಮುಂದಾಗಿತ್ತು. ಪರಿಹಾರದ ಮೊತ್ತ ಮಾರುಕಟ್ಟೆ ದರಕ್ಕಿಂತ ತೀರಾ ಕಡಿಮೆ ಎನ್ನುವ ಕಾರಣಕ್ಕಾಗಿ ರೈತ ಪರಿಹಾರವನ್ನು ತಿರಸ್ಕರಿಸಿ ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಏರಿದ್ದರು.ರೈತರ ಮನವಿ ಪುರಸ್ಕರಿಸಿದ ನ್ಯಾಯಾಲಯ ಚದರ ಅಡಿಗೆ 375 ರೂ.ನಂತೆ ಪರಿಹಾರ ನೀಡುವಂತೆ 2021ರಲ್ಲಿ ಆದೇಶ ನೀಡಿತ್ತು. ನ್ಯಾಯಾಲಯ ಅದೇಶ ನೀಡಿ ಎರಡು ವರ್ಷ ಕಳೆದರೂ ಪರಿಹಾರ ನೀಡಲು ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಕಚೇರಿ ಹಾಗೂ ಪುರಸಭೆ ಕಚೇರಿ ಜಪ್ತಿಗೆ ಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆ ಅಮೀನರು ಉಪವಿಭಾಗಾಧಿಕಾರಿಗಳ ವಾಹನ ಸೇರಿದಂತೆ ಕಚೇರಿಯ ಕಂಪ್ಯೂಟರ್, ಕುರ್ಚಿ, ಕಡತಗಳು ಸೇರಿದಂತೆ ಮೌಲ್ಯಯುತ ಚರಾಸ್ತಿಗಳನ್ನು ಹಾಗೂ ಪುರಸಭೆಯ ಚರಾಸ್ತಿಗಳನ್ನು ಜಪ್ತಿ ಮಾಡಿದರು.
4.89 ಕೋಟಿ ರೂ.ಪರಿಹಾರ ಮೊತ್ತ ಪಡೆಯಲು ಕಾನೂನು ಹೋರಾಟ ನಡೆಸುತ್ತಿರುವ ರೈತ ಸತ್ಯನಾರಾಯಣ ಅವರಿಗೆ 2.25ಕೋಟಿ ರೂ. ಡಿಪಾಸಿಟ್ ಮಾಡುವಂತೆ ಹೈಕೋರ್ಟ್ ಕೂಡ ನಿರ್ದೇಶನ ನೀಡಿತ್ತಾದರೂ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ಸ್ಪಂದಿಸಿಲ್ಲ. ಕಳೆದೆರಡು ವರ್ಷದಲ್ಲಿ ಎರಡು ಬಾರಿ ವಾಹನ ಜಪ್ತಿ ಹಾಗೂ ನಾಲ್ಕು ಬಾರಿ ಚರಾಸ್ತಿ ಜಪ್ತಿಗೆ ನ್ಯಾಯಾಲಯ ಆದೇಶ ಹೊರಡಿಸಿದೆ. ಅಧಿಕಾರಿಗಳು ಜಪ್ತಿಗೆ ತೆರಳಿದಾಗ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಕಾಲಾವಕಶ ಕೇಳಿಕೊಂಡಿದ್ದರು. ಆನಂತರದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಕೀಲ ಧರ್ಮಪುರ ಲೋಕೇಶ್ ತಿಳಿಸಿದರು.
ಸ್ವಾಧೀನ ಪಡಿಸಿಕೊಂಡಿರುವ ಜಮೀನಿಗೆ ನ್ಯಾಯಾಲಯದ ತೀರ್ಪಿನಂತೆ ಈ ಹಿಂದಿನ ಸರ್ಕಾರ ರೈತರಿಗೆ ಜಮೀನಿಗೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದೆ. ಆದರೆ ಪುರಸಭೆ ಅಧಿಕಾರಿಗಳು ಪರಿಹಾರ ಮೊತ್ತವನ್ನು ಒದಗಿಸಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.ಹೀಗಾಗಿ ಹೋರಾಟದ ಮೂಲಕ ಪರಿಹಾರದ ಮೊತ್ತವನ್ನು ಪಡೆಯಲು ನ್ಯಾಯಾಲಯ ಮೋರೆ ಹೋಗಿದ್ದೇವೆ.ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಸಹ ಪಾಲಿಸುತ್ತಿಲ್ಲ. ಅಧಿಕಾರಿಗಳು ಪರಿಹಾರದ ಮೊತ್ತ ಒದಗಿಸಿದ್ದರೆ ಮುಂದಿನ ಕಾನೂನು ಹೋರಾಟ ನಡೆಸುವುದಾಗಿ ರೈತ ಸತ್ಯನಾರಾಯಣ ತಿಳಿಸಿದರು.
ಈ ವೇಳೆ ವಕೀಲ ಪುಟ್ಟಸ್ವಾಮಿ, ಅಮೀನರಾದ ಸೂರ್ಯನಾರಾಯಣ, ಸಿದ್ದರಾಜು, ತ್ರಿವೇಣಿ, ಆನಂದ, ರೈತ ಚಂದ್ರೆ ಜಯರಾಮೇಗೌಡ ಇತರರು ಇದ್ದರು.