ಮನೆ ಸ್ಥಳೀಯ ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣಪತಿ ಮೂರ್ತಿ ಬಳಸಿ: ಡಾ. ಕೆ ವಿ ರಾಜೇಂದ್ರ

ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗಣಪತಿ ಮೂರ್ತಿ ಬಳಸಿ: ಡಾ. ಕೆ ವಿ ರಾಜೇಂದ್ರ

0

ಮೈಸೂರು: ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ಪಿ.ಓ.ಪಿ ( ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣೇಶನ ಬಳಕೆ ನಿಷೇಧಿಸಿದ್ದು, ಮಣ್ಣಿನಿಂದ ಮಾಡಿದ ಗಣಪತಿ ಮೂರ್ತಿಗಳನ್ನು ಬಳಕೆ ಮಾಡಿ ಪರಿಸರ ಸ್ನೇಹಿ ಹಬ್ಬವನ್ನು ಆಚರಿಸಿ ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ ರಾಜೇಂದ್ರ ಅವರು ತಿಳಿಸಿದರು.

ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ, ಗೌರಿ ಗಣೇಶ ಹಬ್ಬದ ಪೂರ್ವಭಾವಿ ಸಭೆಯ ಅಧ್ಯಕ್ಷೆಯನ್ನು ವಹಿಸಿ ಮಾತನಾಡಿದ ಅವರು, ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡುವುದನ್ನು ನಾವು ಕಾಣಬಹುದಾಗಿದೆ. ಪಿ.ಓ.ಪಿ ಬಳಕೆ ಮಾಡಿರುವ ಗಣಪತಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಮಾಡುವುದು ಕಂಡು ಬಂದರೆ ತಕ್ಷಣ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದರು.

ಕಳೆದ ಬಾರಿ ಪಿ.ಓ.ಪಿ ಗಣೇಶ ಮೂರ್ತಿಗಳನ್ನು ತಯಾರಿ ಮಾಡಿರುವ ಕಡೆಗಳಲ್ಲಿ ಈ ಬಾರಿಯೂ ಕೂಡ ಪರಿಶೀಲಿಸಿ ತಯಾರಿಕೆ ಆಗದಂತೆ ಮುನ್ನೆಚ್ಚರಿಕೆ ವಹಿಸಿಬೇಕು. ಪಿ.ಓ.ಪಿ ಗಣೇಶನ ಮೂರ್ತಿಗಳ ತಯಾರಿಕೆ ಮತ್ತು ಮಾರಾಟಗಳು ಕಂಡು ಬಂದಲ್ಲಿ ಸಾರ್ವಜರಿಕರು ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾಯ್ದೆ ಅನ್ವಯ ಮಾರಾಟಗಾರರು ಮತ್ತು ತಯಾರಕರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಗರ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ವಾಹನಗಳಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಪ್ರಚಾರವನ್ನು ನೀಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಗಣೇಶ ಮೂರ್ತಿಗಳ ಮಾರಾಟ ಮಳಿಗೆಗಳನ್ನು ನಮ್ಮ ಅಧಿಕಾರಿ ವರ್ಗದವರು ಪರಿಶೀಲನೆ ನಡೆಸಬೇಕು ಹಾಗೂ ಮಾರಾಟ ಮಳಿಗೆಯಲ್ಲಿ ಪಿ.ಓ.ಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಿದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಂಡು ನೀಡಿರುವ ಲೈಸೆನ್ಸ್ ರದ್ದು ಮಾಡಿ ಹಿಂಪಡೆಯಬೇಕು. ನಗರ ಮತ್ತು ತಾಲೂಕು ವ್ಯಾಪ್ತಿಗಳಲ್ಲಿ ವರ್ತಕರ ಸಂಘಗಳ ಜೊತೆಗೂಡಿ ಸಭೆ ನಡೆಸಿ ಪಿ.ಓ.ಪಿ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡದಂತೆ ಜಾಗೃತಿ ಮೂಡಿಸಿ ಎಂದು ತಿಳಿಸಿದರು.

ಮಹಾನಗರ ಪಾಲಿಕೆ, ಪುರಸಭೆ ಮತ್ತು ನಗರ ಸಭೆ ಮಟ್ಟದಲ್ಲಿ ಮೊಬೈಲ್ ಟ್ಯಾಂಕರ್ ವ್ಯವಸ್ಥೆಯನ್ನು ಮಾಡಿ, ಗಣಪತಿ ವಿಸರ್ಜನೆಗೆ ಅವಕಾಶವನ್ನು ನೀಡಬೇಕು. ಮಣ್ಣಿನಿಂದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ನಿರ್ಮಾಣ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಪಾಲಿಕೆ ವ್ಯಾಪ್ತಿಯಲ್ಲಿ ಉಚಿತ ಸ್ಥಳವನ್ನು ನೀಡಿ. ಈ ಕುರಿತು ವ್ಯಾಪಕ ಪ್ರಚಾರವನ್ನು ನೀಡಿ ಸ್ಥಳೀಯರಿಗೆ ಮಣ್ಣಿನ ಗಣಪತಿ ಮೂರ್ತಿಗಳನ್ನು ದೊರಕುವಂತೆ ಮಾಡಿ ಎಂದು ತಿಳಿಸಿದರು.

 ಮಣ್ಣಿನ ಗಣಪತಿ ವಿಸರ್ಜನೆ ಮಾಡಲು ಕೆರೆ ಕಟ್ಟೆಗಳ ಬಳಿ ಹೊಂಡವನ್ನು ನಿರ್ಮಿಸಿ ವಿಸರ್ಜನೆಗೆ ಅವಕಾಶ ಮಾಡಿಕೊಡಿ. ವಿಸರ್ಜನೆ ಸಂಧರ್ಭದಲ್ಲಿ ಮೂರ್ತಿಗಳಿಗೆ ಬಳಕೆ ಮಾಡಿರುವ ಅಲಂಕಾರಿಕ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು. ಗಣೇಶ ಮೂರ್ತಿ ಕೂರಿಸುವ ಜಾಗಗಳಲ್ಲಿ ಶಬ್ದಮಾಲಿನ್ಯ ಆಗದಂತೆ ಕ್ರಮ ವಹಿಸಬೇಕು ಮತ್ತು ಧ್ವನಿ ವರ್ಧಕಗಳನನ್ನು ಅಳವಡಿಸಲು ಸಂಬoಧಿತ ಅಧಿಕಾರಿಗಳಿಂದ ಅನುಮತಿಯನ್ನು ಪಡೆಯಬೇಕು. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯ ವರೆಗೆ ಯಾವುದೇ ರೀತಿ ಭಕ್ತಿ ಗೀತೆ ಅಥವಾ ಗೀತಾ ಗಾಯನಗಳನ್ನು ಪ್ರಚಾರ ಮಾಡದಂತೆ ಸೂಚಿಸಬೇಕು ಎಂದರು.

 4 ರಿಂದ 5 ಅಡಿ ಒಳಗೆ ಗಣಪತಿ ಮೂರ್ತಿಗಳನ್ನು ಬಳಕೆ ಮಾಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಗಣಪತಿ ಮೂರ್ತಿ ವಿಚಾರಕ್ಕೆ ಸಂಬoಧಿಸಿದoತೆ ಗ್ರಾಮ ಪಂಚಾಯಿತಿ ಮತ್ತು ನಗರ ಸಭೆಗಳ ವ್ಯಾಪ್ತಿಯಲ್ಲಿ ಬೈಲಾಗಳನ್ನು ಬಳಕೆ ಮಾಡಿಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ತಯಾರಿಕೆ ಸಂದರ್ಭದಲ್ಲಿ ಬಣ್ಣ ಲೇಪಿತ ವಿಗ್ರಹಗಳು ಹೆಚ್ಚು ಬಳಕೆಯಲ್ಲಿರುತ್ತವೆ. ಅಂತಹ ಮೂರ್ತಿಗಳ ಬಳಕೆ ಮಾಡದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ನಿಯಮಾವಳಿಗಳನ್ನು ಅನುಸರಿಸದೆ ಇದ್ದಲ್ಲಿ ಅಂತವರ ವಿರುದ್ದ ಮಾಲಿನ್ಯ ನಿಯಂತ್ರಣ ಕಾಯ್ದೆ ಅನ್ವಯ ಶಿಸ್ತು ಕ್ರಮ ಜರುಗಿಸಿ ದಂಡ ವಿಧಿಸಲಾಗುವುದು. ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಬರದಂತೆ ಜಾಗೃತಿಯಿಂದ ಹಬ್ಬವನ್ನು ಆಚರಿಸಿ. ಪಾಲಿಕೆ ಮತ್ತು ತಾಲ್ಲೂಕು ವ್ಯಾಪ್ತಿಗಳಲ್ಲಿ ಗಣಪತಿ ವಿಸರ್ಜನೆಗೆ ಮೊಬೈಲ್ ಟ್ಯಾಂಕ್ ವ್ಯವಸ್ಥೆಯಿದ್ದಲಿ ಉಪಯೋಗಿಸಿಕೊಳ್ಳಿ. ಏಕಬಳಕೆ ಪ್ಲಾಸ್ಟಿಕ್ ಅನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಬಳಕೆಗಳು ಕಂಡು ಬಂದಲ್ಲಿ ತಕ್ಷಣ ಕ್ರಮ ಜರುಗಿಸಿ ದಂಡ ವಿದಿಸಿ ಎಂದು ತಿಳಿಸಿದರು.

ಸಭೆಯಲ್ಲಿ ಉಪ ಪೋಲಿಸ್ ಆಯುಕ್ತರಾದ ಎಸ್. ಜಾನ್ಹವಿ, ಉಪ ವಿಭಾಗಾಧಿಕಾರಿಗಳಾದ ರಕ್ಷಿತ್, ಪರಿಸರ ಅಧಿಕಾರಿಗಳಾದ ಶುಭ, ಮಾಲಿನ್ಯ ನಿಯಂತ್ರಣ ಮಂಡಳಿಯ ಹರೀಶ್ ಶಂಕರ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.