ಮನೆ ರಾಜ್ಯ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ: ಬಿ.ಎಸ್ ಸುರೇಶ್

ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ: ಬಿ.ಎಸ್ ಸುರೇಶ್

0

ಬೆಂಗಳೂರು: ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ (NE-7) ಹೆದ್ದಾರಿ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಎಂದು ನಗರಾಭಿವೃದ್ದಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್ ಸುರೇಶ್ (ಬೈರತಿ) ರವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಬೆಂಗಳೂರಿನ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ (NE-7) ಹೆದ್ದಾರಿ ನಿರ್ಮಾಣದ ಪ್ರಗತಿ ಮತ್ತು ರಾಷ್ಟ್ರೀಯ ಹೆದ್ದಾರಿ NH-75 ರ ನಿರ್ವಹಣೆ ಮತ್ತು ಅದರಲ್ಲಿರುವ ಲೋಪಗಳು ಕುರಿತಂತೆ ಸಭೆ ನಡೆಸಿದ ಮಾನ್ಯ ಸಚಿವರು, ರಾಜ್ಯ ಅದರಲ್ಲೂ ಕೋಲಾರ ಜಿಲ್ಲೆಯ ಭಾಗದಲ್ಲಿ ಹಾದು ಹೋಗುವ ರಸ್ತೆ ನಿರ್ಮಾಣದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಎಂದು ಸೂಚಿಸಿದರು.

ಕೋಲಾರ ಜಿಲ್ಲೆಯಲ್ಲಿ ಹಾದು ಹೋಗುವ 56 ಕಿ.ಮೀ ವ್ಯಾಪ್ತಿಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ 3 ಸ್ಥಳಗಳಲ್ಲಿ ಜಮೀನು ಭೂ-ಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ನಿರ್ಮಾಣ ಕಾರ್ಯಕ್ಕೆ ಸಲ್ಪ ಅಡೆತಡೆಯಾಗಿದೆ ಎಂದು ಎಕ್ಸ್ ಪ್ರೆಸ್ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಸಚಿವರ ಗಮನಕ್ಕೆ ತಂದರು.

ಸಚಿವರು ಕೂಡಲೇ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ದೂರವಾಣಿ ಮೂಲಕ ಕರೆಮಾಡಿ ಹೆದ್ದಾರಿ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳಲು ಜಮೀನಿನ ಮಾಲೀಕರು ಅಡ್ಡಿ ಪಡಿಸುತ್ತಿದ್ದು, ಪೊಲೀಸ್ ಇಲಾಖೆಯ ನೇರವಿನಿಂದ ಅದನ್ನು ತೆರವುಗೊಳಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ಅನುವು ಮಾಡಿಕೊಡಬೇಕೆಂದು ಸೂಚಿಸಿದರು.

ಬೆಂಗಳೂರು-ಚೆನೈ ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣದ ಕಾಮಗಾರಿ ಅದಷ್ಟು ಬೇಗ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಲ್ಲದೇ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ-75 ರ ನಿರ್ವಹಣೆ ಸಮರ್ಪಕವಾಗಿ ಆಗಬೇಕು, ಬೈರತಿ ಸುರೇಶ ಅವರು ರಸ್ತೆಯಲ್ಲಿ ಯಾವುದಾದರು ಲೋಪ ದೋಷವಿದ್ದರೆ ಅದನ್ನು ಕೂಡಲೇ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಅಭಿಯಂತರರುಗಳಿಗೆ ಸೂಚಿಸಿದರು.

ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಹೆದ್ದಾರಿ ಸಂಕ್ಷಿಪ್ತ ವಿವರ:-

ಬೆಂಗಳೂರು-ಚೆನೈ ಎಕ್ಸ್ ಪ್ರೆಸ್ ಹೆದ್ದಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಕೊಳತ್ತೂರು ಗ್ರಾಮದಲ್ಲಿ ಆರಂಭವಾಗಿ ಚೆನೈನ ಶ್ರೀಪೆರಂಬದೂರ್ ವರೆಗೂ ಸಾಗಲಿದೆ. ಒಟ್ಟಾರೆಯಾಗಿ 285 ಕಿ.ಮೀ ಉದ್ದದ ರಸ್ತೆ ಇದಾಗಿದ್ದು, ರಾಜ್ಯದಲ್ಲಿ 77.23 ಕಿ.ಮೀ ಸಾಗಲಿದೆ ಆಂದ್ರಪ್ರದೇಶದಲ್ಲಿ 91 ಕಿ.ಮೀ ಹಾಗೂ ತಮಿಳುನಾಡಿನಲ್ಲಿ 116.60 ಕಿ.ಮೀ ವ್ಯಾಪಿಸಿರುತ್ತದೆ.

ಯೋಜನಾ ವೆಚ್ಚ ಅಂದಾಜು 40 ಸಾವಿರ ಕೋಟಿ ರೂಪಾಯಿಗಳಾಗಲಿದ್ದು, ಕೇಂದ್ರ ಸರ್ಕಾರದ ಪಾಲು ಶೇ. 40 ರಷ್ಟು ಇದ್ದು, ಪಿಪಿಟಿ ಮಾಡಲ್ ನಲ್ಲಿ ಶೇ.60 ರಷ್ಟು ಇರುತ್ತದೆ. ಕೋಲಾರ ಜಿಲ್ಲೆಯಲ್ಲಿ ಮಾಲೂರು, ಬಂಗಾರಪೇಟೆ, ಕೆ.ಜಿ.ಎಫ್ ಹಾಗೂ ಬೇತಮಂಗಲ ಮೂಲಕ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ಹೆದ್ದಾರಿ NE-7 ಹಾದು ಹೋಗಲಿದೆ.

ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ, ಬೆಂಗಳೂರು-ಚೆನೈ ಎಕ್ಸ್ಪ್ರೆಸ್ ಹೆದ್ದಾರಿ ಯೋಜನಾ ನಿರ್ದೇಶಕರಾದ ಅರ್ಚನ, ನಗರಾಭಿವೃದ್ದಿ ಇಲಾಖೆಯ ಉಪ ಕಾರ್ಯದರ್ಶಿ ರಘುನಂದನ್, ಭಾರತೀಯ ರಾಷ್ಟ್ರೀಯ ಹೆದ್ದಾರಿಯ ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.