ಮನೆ ರಾಜ್ಯ ಕೊಡಗು: ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ

ಕೊಡಗು: ಕಾಡಾನೆ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿ

0

ಕೊಡಗು: ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮದಲ್ಲಿ ನಡೆದಿದೆ.

ಸೋಮವಾರ ಕಾರ್ಯಾಚರಣೆಗೆ ತೆರಳಿದ್ದ ಅರಣ್ಯ ಇಲಾಖೆಯ ಆನೆ ಕಾರ್ಯಪಡೆಯ ಸಿಬ್ಬಂದಿ ಗಿರೀಶ್ (35) ಮೃತಪಟ್ಟವರು.

ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮದಲ್ಲಿ ಕಾಡಾನೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ತೆರಳಿದ್ದರು. ಈ ವೇಳೆ ಆನೆ ದಾಳಿ ಮಾಡಿದ್ದರಿಂದ ಗಿರೀಶ್ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಪಂ ವ್ಯಾಪ್ತಿಯ ಡಿ ಬ್ಲಾಕ್ ಬಳಿ ಬೈಕ್​​ ನಲ್ಲಿ ತೆರಳುತ್ತಿದ್ದ ಸುಂಟಿಕೊಪ್ಪದ ನಿವಾಸಿ ಮುರುಗೇಶ್ ಎಂಬುವವರ ಮೇಲೆ ಒಂಟಿಸಲಗ ಮೊದಲು ದಾಳಿ ಮಾಡಿತ್ತು. ಇದರಿಂದ ಗಾಯಗೊಂಡಿದ್ದ ಮುರುಗೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಘಟನೆಯಿಂದ ಬೈಕ್​ಗೆ ಹಾನಿಯಾಗಿತ್ತು. ಅಲ್ಲಿಂದ ಕಾಲ್ಕಿತ್ತ ಕಾಡಾನೆ ಸ್ವಲ್ಪ ದೂರದಲ್ಲೇ ಇದ್ದ ಹಬೀಬ್ ತೋಟದತ್ತ ತೆರಳಿ ಮತ್ತೊಬ್ಬ ವ್ಯಕ್ತಿಯ ಮೇಲೂ ದಾಳಿ ಮಾಡಿತ್ತು.ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸುತ್ತಿದ್ದರು.

ಸುಂಟಿಕೊಪ್ಪ ಕೆದಕಲ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಒಂಟಿ ಸಲಗವನ್ನು ಮೀನುಕೊಲ್ಲಿ ಮೀಸಲು ಅರಣ್ಯಕ್ಕೆ ಓಡಿಸಲು 20 ಮಂದಿಯ ಆರ್ ​ಆರ್ ​ಟಿ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಿರೀಶ್ ನನ್ನು ಅಟ್ಟಾಡಿಸಿಕೊಂಡು ಬಂದ ಕಾಡಾನೆ, ದಾಳಿ ಮಾಡಿ ತುಳಿದು ಹಾಕಿದೆ. ಇದರಿಂದ ಗಿರೀಶ್ ಮೃತಪಟ್ಟಿದ್ದಾರೆ.