ಮನೆ ಮನರಂಜನೆ ಶಾರುಖ್ ಖಾನ್ ನಟನೆಯ ‘ಜವಾನ್’ ಚಿತ್ರ ವಿಮರ್ಶೆ

ಶಾರುಖ್ ಖಾನ್ ನಟನೆಯ ‘ಜವಾನ್’ ಚಿತ್ರ ವಿಮರ್ಶೆ

0

ಶಾರುಖ್​ ಖಾನ್​ ನಟನೆಯ ‘ಜವಾನ್​’ ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅದಕ್ಕೆ ಕಾರಣ ಹಲವು. ಕಾಲಿವುಡ್ ​ನ ಖ್ಯಾತ ನಿರ್ದೇಶಕ ಅಟ್ಲಿ ಅವರು ಈ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ.

ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ನಯನತಾರಾ ಮುಂತಾದ ಸ್ಟಾರ್​ ಕಲಾವಿದರು ಶಾರುಖ್​ ಖಾನ್​ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇಂದು (ಸೆಪ್ಟೆಂಬರ್​ 7) ಈ ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಿದೆ. ಮಾಸ್​ ಮನರಂಜನೆ ಬಯಸುವ ಪ್ರೇಕ್ಷಕರಿಗೆ ‘ಜವಾನ್​’ ಸಿನಿಮಾ ಇಷ್ಟ ಆಗುತ್ತದೆ. ಒಂದು ಕಮರ್ಷಿಯಲ್​ ಕಥೆಯ ಮೂಲಕ ಜನರಿಗೆ ಸಂದೇಶ ನೀಡುವ ಕೆಲಸವೂ ಆಗಿದೆ.

 ‘ಜವಾನ್​’ ಸಿನಿಮಾದಲ್ಲಿ ಬಾಲಿವುಡ್​ ಮತ್ತು ಸೌತ್​ ಸಿನಿಮಾದ ಸಂಗಮ ಆಗಿದೆ. ಕಾಲಿವುಡ್​ನ ಪ್ರತಿಭಾವಂತ ಕಲಾವಿದರು ಮತ್ತು ತಂತ್ರಜ್ಞರು ಈ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ಕೈ ಜೋಡಿಸಿದ್ದಾರೆ. ಹಾಗಾಗಿ ಈ ಚಿತ್ರದ ಮೇಕಿಂಗ್​ ಕೂಡ ಬಹುತೇಕ ಸೌತ್​ ಶೈಲಿಯಲ್ಲಿದೆ. ಪ್ಯಾನ್​ ಇಂಡಿಯಾ ಸಿನಿಮಾಗಳ ಟ್ರೆಂಡ್​ ಚಾಲ್ತಿಯಲ್ಲಿರುವ ಈ ಕಾಲಘಟ್ಟವನ್ನು ಗಮನದಲ್ಲಿ ಇಟ್ಟುಕೊಂಡೇ ಅಟ್ಲಿ ಅವರು ಸ್ಕ್ರಿಪ್ಟ್​ ಮಾಡಿದಂತಿದೆ. ಇದು ಬರೀ ಮೇಕಿಂಗ್ ವಿಚಾರಕ್ಕೆ ಮಾತ್ರವಲ್ಲ, ಇದರಲ್ಲಿ ಹೇಳಿರುವ ಸಂದೇಶಕ್ಕೂ ಅನ್ವಯ. ಇಡೀ ದೇಶದಲ್ಲಿ ಕಾಡುತ್ತಿರುವ ರೈತರ ಸಮಸ್ಯೆ, ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ, ಎಲ್ಲಡೆ ಬೇರು ಬಿಟ್ಟಿರುವ ಭ್ರಷ್ಟಾಚಾರ ಮುಂತಾದ ಅಂಶಗಳ ಬಗ್ಗೆ ಈ ಸಿನಿಮಾದಲ್ಲಿ ವಿವರಿಸಲಾಗಿದೆ. ಎಲ್ಲವನ್ನೂ ಪಕ್ಕಾ ಮಾಸ್​ ಕಮರ್ಷಿಯಲ್​ ಶೈಲಿಯಲ್ಲಿ ನಿರೂಪಿಸಲಾಗಿದೆ.

ನಟ ಶಾರುಖ್​ ಖಾನ್​ ಅವರು ‘ಜವಾನ್​’ ಸಿನಿಮಾದಲ್ಲಿ ದ್ವಿಪಾತ್ರ ಮಾಡಿದ್ದಾರೆ. ಅಪ್ಪ-ಮಗನ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಎರಡು ಕಾಲಘಟ್ಟದಲ್ಲಿ ಕಥೆ ಸಾಗುತ್ತದೆ. ನಟನೆಗಿಂತಲೂ ಹೆಚ್ಚಾಗಿ ಅವರು ಆ್ಯಕ್ಷನ್​ಗೆ ಒತ್ತು ನೀಡಿದ್ದಾರೆ. ಇದು ಪಕ್ಕಾ ಮಾಸ್​ ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ಪೂರೈಸಲು ಶಾರುಖ್​ ಖಾನ್​ ಪ್ರಯತ್ನಿಸಿದ್ದಾರೆ. ಚಿತ್ರದುದ್ದಕ್ಕೂ ಅವರು ಹಲವು ಗೆಟಪ್ ​ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಪ್ಪ ಮತ್ತು ಮಗನಾಗಿ ಎರಡು ಬೇರೆ ಬೇರೆ ಶೇಡ್​ ನಲ್ಲಿ ಶಾರುಖ್​ ಅಭಿನಯಿಸಿದ್ದಾರೆ. ಆರಂಭದ ಕೆಲವು ದೃಶ್ಯಗಳಲ್ಲಿ ವಿಲನ್​ ರೀತಿ ಅಬ್ಬರಿಸುವ ಅವರು ನಂತರ ಹೀರೋಯಿಸಂ ತೋರಿಸುತ್ತಾರೆ. ಈ ರೀತಿಯ ಚಿಕ್ಕ-ಪುಟ್ಟ ಟ್ವಿಸ್ಟ್ ​ಗಳ ಕಾರಣದಿಂದ ಪ್ರೇಕ್ಷಕರನ್ನು ಹಿಡಿದಿರುವ ಪ್ರಯತ್ನ ಮಾಡಲಾಗಿದೆ.

ಇಡೀ ಸಿನಿಮಾದಲ್ಲಿ ಶಾರುಖ್​ ಖಾನ್​ ಆವರಿಸಿಕೊಂಡಿದ್ದಾರೆ. ಆದರೆ ಅವರು ಇನ್ನುಳಿದ ಕಲಾವಿದರನ್ನು ಮೂಲೆಗೆ ತಳ್ಳಿಲ್ಲ. ಸೂಪರ್​ ಕಾಪ್​ ಆಗಿ ಕಾಣಿಸಿಕೊಂಡಿರುವ ನಯನತಾರಾ, ಖೈದಿಗಳಾಗಿ ಕಾಣಿಸಿಕೊಂಡ ಪ್ರಿಯಾಮಣಿ, ಸಾನ್ಯಾ ಮಲೋತ್ರಾ, ಫ್ಲ್ಯಾಶ್​ ಬ್ಯಾಕ್​ ದೃಶ್ಯಗಳಲ್ಲಿ ಬರುವ ದೀಪಿಕಾ ಪಡುಕೋಣೆ ಸೇರಿದಂತೆ ಎಲ್ಲರಿಗೂ ಅಗತ್ಯವಾದ ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ. ಕೆಲವೇ ದೃಶ್ಯಗಳಲ್ಲಿ ಬಂದು ಹೋದರೂ ಕೂಡ ದೀಪಿಕಾ ಪಡುಕೋಣೆ ನಿಭಾಯಿಸಿರುವ ಪಾತ್ರಕ್ಕೆ ತೂಕ ಇದೆ. ನಟ ವಿಜಯ್​ ಸೇತುಪತಿ ಅವರು ಹೊಡಿಬಡಿ ದೃಶ್ಯಗಳಿಗಿಂತಲೂ ಹೆಚ್ಚಾಗಿ ಹಾವಭಾವದಲ್ಲೇ ಹೀರೋಗೆ ಟಕ್ಕರ್​ ನೀಡುವ ವಿಲನ್​ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಆದರೆ ಅವರ ಅಭಿಮಾನಿಗಳು ಬಯಸುವಷ್ಟು ತೀವ್ರತೆಯಿಂದ ಈ ಪಾತ್ರ ಮೂಡಿಬಂದಿಲ್ಲ ಎನಿಸುತ್ತದೆ. ‘ಜವಾನ್​’ ಸಿನಿಮಾದಲ್ಲಿ ಸಂಜಯ್​ ದತ್​ ಅವರು ಒಂದು ವಿಶೇಷವಾದ ಪಾತ್ರ ಮಾಡಿದ್ದಾರೆ. ಕಥೆಯ ಒಂದು ಮಹತ್ವದ ಘಟ್ಟದಲ್ಲಿ ಅವರ ಪಾತ್ರ ಎಂಟ್ರಿ ಆಗುತ್ತದೆ. ಚೂರು ಕಾಮಿಡಿ ಮಾಡುತ್ತಾ, ಇನ್ನೂ ಒಂಚೂರು ಖಡಕ್​ ಆಗಿ ನಡೆದುಕೊಳ್ಳುತ್ತಾ ಅವರು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾರೆ.

ಒಟ್ಟಾರೆಯಾಗಿ ‘ಜವಾನ್​’ ಸಿನಿಮಾ ಬಗ್ಗೆ ಹೇಳೋದಾದರೆ ಇದು ಪಕ್ಕಾ ಶಾರುಖ್​ ಖಾನ್​ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಿದೆ. ಆದರೆ ಇಲ್ಲಿ ರೊಮ್ಯಾಂಟಿಕ್​ ಆದಂತಹ ಶಾರುಖ್​ ಹೆಚ್ಚಾಗಿ ಕಾಣಸಿಗುವುದಿಲ್ಲ. ಆ್ಯಕ್ಷನ್​ ಹೀರೋ ಆಗಿ ಅವರು ಅಬ್ಬರಿಸಿದ್ದಾರೆ. ಹೊಡಿಬಡಿ ದೃಶ್ಯಗಳ ಜೊತೆಗೆ ಒಂದಷ್ಟು ದೇಶಭಕ್ತಿ, ಫ್ಯಾಮಿಲಿ ಎಮೋಷನ್​ ಮುಂತಾದ ಅಂಶಗಳನ್ನು ಬೆರೆಸುವ ಕೆಲಸ ಆಗಿದೆ. ಎಲ್ಲಿಯೂ ಬೋರ್​ ಆಗದಂತೆ ಆರಂಭದಿಂದ ಕೊನೇ ತನಕ ನೋಡಿಸಿಕೊಂಡು ಹೋಗುವ ಗುಣ ಈ ಚಿತ್ರಕ್ಕಿದೆ.