ಮನೆ ಮನರಂಜನೆ ತಮಿಳಿನ ಖ್ಯಾತ ನಟ ಮಾರಿಮುತ್ತು ಹೃದಯಾಘಾತದಿಂದ ನಿಧನ

ತಮಿಳಿನ ಖ್ಯಾತ ನಟ ಮಾರಿಮುತ್ತು ಹೃದಯಾಘಾತದಿಂದ ನಿಧನ

0

ಚೆನ್ನೈ: ತಮಿಳಿನ ಖ್ಯಾತ ನಟ ಹಾಗೂ ನಿರ್ದೇಶಕ ಜಿ. ಮಾರಿಮುತ್ತು ಅವರು ಹೃದಯಾಘಾತದಿಂದ ಇಂದು (ಸೆ. 8) ಮೃತಪಟ್ಟಿದ್ದಾರೆ. ಅವರಿಗೆ 58 ವರ್ಷ ವಯಸ್ಸಾಗಿತ್ತು.

ಯೂಟ್ಯೂಬ್ ಸೆನ್ಸೇಶನ್ ಆಗಿದ್ದ ಮಾರಿಮುತ್ತು ಇತ್ತೀಚೆಗೆ ರಜಿನಿಕಾಂತ್ ಅವರ ಜೈಲರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಅವರ ಸಾವಿಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಶುಕ್ರವಾರ ಬೆಳಿಗ್ಗೆ ಮಾರಿಮುತ್ತು ಅವರು ಟಿವಿ ಶೋ ಒಂದರ ಡಬ್ಬಿಂಗ್​ ನಲ್ಲಿ ಭಾಗಿ ಆಗಿದ್ದರು. ಚೆನ್ನೈನ ಸ್ಟುಡಿಯೋದಲ್ಲಿ ಈ ಡಬ್ಬಿಂಗ್ ಕೆಲಸ ನಡೆಯುತ್ತಿತ್ತು. ಅವರು ಡಬ್ ಮಾಡುತ್ತಿರುವಾಗಲೇ ಕುಸಿದು ಬಿದ್ದಿದ್ದು, ಅಲ್ಲಿರುವ ಖಾಸಗಿ ಆಸ್ಪತ್ರೆಗೆ ಅವರನ್ನು ತೆಗೆದುಕೊಂಡು ಹೋಗಲಾಯಿತು. ಆದರೆ, ಆಗಲೇ ಅವರು ಮೃತಪಟ್ಟಿದ್ದರು. ಚೆನ್ನೈನಲ್ಲಿರುವ ಅವರ ನಿವಾಸಕ್ಕೆ ಮೃತದೇಹವನ್ನು ಸ್ಥಳಾಂತರಿಸಲಾಗಿದೆ.

ವೃತ್ತಿ ಜೀವನ: ಮಾರಿಮುತ್ತು ಅವರು ಹುಟ್ಟೂರಾದ ಥೇಣಿಯಯಿಂದ ಕಾಲಿವುಡ್ ನಲ್ಲಿ ನಿರ್ದೇಶಕನಾಗುವ ಕನಸು ಹೊತ್ತು ಓಡಿ ಬಂದಿದ್ದರು ಎಂದು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. 2008ರಲ್ಲಿ ‘ಕನ್ನುಮ್ ಕನ್ನುಮ್’ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದರು.

ಚಲನಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ, ಅವರು ತಮಿಳು ಚಲನಚಿತ್ರಗಳಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ, ಅವರು ಗೀತರಚನೆಕಾರ ವೈರಮುತ್ತು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ತಮಿಳು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.

‘ವಾಲಿ’, ‘ಜೀವ’, ‘ಪರಿಯೇರುಂ ಪೆರುಮಾಳ್’ ಮತ್ತು ‘ಜೈಲರ್’ ಚಿತ್ರಗಳಲ್ಲಿ ಅವರು ಮಿಂಚಿದ್ದಾರೆ. 2022 ರಿಂದ, ಅವರು ತಮಿಳು ದೂರದರ್ಶನ ಧಾರಾವಾಹಿ ‘ಎಥಿರ್ ನೀಚಲ್’ ನ ಭಾಗವಾಗಿದ್ದರು. ಮಾರಿಮುತ್ತು ಅವರು ಯೂಟ್ಯೂಬ್‌ನಲ್ಲಿ ಸೆನ್ಸೇಷನ್ ಆಗಿದ್ದರು ಮತ್ತು ಅವರ ಅಭಿಪ್ರಾಯಗಳಿಗಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೆಂಡಿಂಗ್ ಆಗಿದ್ದರು. ಅವರ ಟಿವಿ ಕಾರ್ಯಕ್ರಮದ ರೀಲ್‌ಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿವೆ.