ಮನೆ ಸ್ಥಳೀಯ ಅನಧಿಕೃತ ಮಸಾಜ್ ಪಾರ್ಲರ್, ಬ್ಯೂಟಿ ಪಾರ್ಲರ್ ವಿರುದ್ಧ ಪಾಲಿಕೆ, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ: ಬ್ಯೂಟಿಷಿಯನ್ಸ್ ವೆಲ್...

ಅನಧಿಕೃತ ಮಸಾಜ್ ಪಾರ್ಲರ್, ಬ್ಯೂಟಿ ಪಾರ್ಲರ್ ವಿರುದ್ಧ ಪಾಲಿಕೆ, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ: ಬ್ಯೂಟಿಷಿಯನ್ಸ್ ವೆಲ್ ಫೇರ್ ಅಸೋಸಿಯೇಷನ್

0

ಮೈಸೂರು: ಮೈಸೂರಿನಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಬ್ಯೂಟಿ ಪಾರ್ಲರ್ ಮತ್ತು ಮಸಾಜ್ ಪಾರ್ಲರ್ ಗಳ ಬಗ್ಗೆ ನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ. ಇದರಿಂದಾಗಿ ಅಧಿಕೃತ ಬ್ಯೂಟಿ ಪಾರ್ಲರ್ ಗಳಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಮೈಸೂರು ಬ್ಯೂಟಿಷಿಯನ್ಸ್ ವೆಲ್ ಫೇರ್ ಅಸೋಸಿಯೇಷನ್ ಅಧ್ಯಕ್ಷೆ ವೇದಾವತಿ ಎನ್ ರೈ ಬೇಸರ ವ್ಯಕ್ತಪಡಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಸೋಸಿಯೇಷನ್ ವತಿಯಿಂದ ಕಳೆದ  25 ವರ್ಷಗಳಿಂದ ಬ್ಯೂಟಿ ಪಾರ್ಲರ್ ಸಮೀಕ್ಷೆ ನಡೆಸುತ್ತಿದ್ದು, ಯಾವುದೇ ಪರವಾನಗಿ ಇಲ್ಲದೇ ತೆರೆಯಲಾಗುತ್ತಿರುವ ಅಥವಾ ಆರೋಗ್ಯ ಇಲಾಖೆಯಿಂದ ಪರೀಕ್ಷಿಸಲ್ಪಟ್ಟಿರುವ ಪರವಾನಗಿ ಇಲ್ಲದ, ಅನೈರ್ಮಲ್ಯ ಪಾರ್ಲರ್ ಗಳ ಪಟ್ಟಿಯನ್ನು ನಗರಪಾಲಿಕೆಗೆ ಸಲ್ಲಿಸುತ್ತಿದೆ. ಆದರೆ ನಗರಪಾಲಿಕೆಯು ಈ ಬಗ್ಗೆ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಬ್ಯೂಟಿ ಪಾರ್ಲರ್ ನಡೆಸಲು ನಾವು ಸಂಬಂಧಪಟ್ಟ ದಾಖಲೆಗಳನ್ನು ಪೊಲೀಸ್ ಆಯುಕ್ತ ಕಛೇರಿಗೆ ಸಲ್ಲಿಸಿ, ಪರಿಶೀಲನೆ ಪ್ರಮಾಣ ಪತ್ರವನ್ನು  ಪಡೆಯಬೇಕು. ಆದರೆ, ನಗರದಲ್ಲಿ ಹಲವಾರು ಮಸಾಜ್ ಪಾರ್ಲರ್ ಗಳನ್ನು ಅನಧಿಕೃತವಾಗಿ ತೆರೆಯುವಾಗ ಪೊಲೀಸರು ಏನು ಮಾಡುತ್ತಿದ್ದರು ? ಎಂದು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ಆಯುಕ್ತರು ಮತ್ತು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸುತ್ತೇವೆ ಎಂದರು.

ಬ್ಯೂಟಿ ಪಾರ್ಲರ್ ಗಳು ಮತ್ತು ಮಸಾಜ್ ಪಾರ್ಲರ್ ಗಳು ಸಾಕಷ್ಟು ವ್ಯಾತ್ಯಾಸವಿದ್ದು, ಪ್ರತಿ ಬಾರಿ ಮಸಾಜ್ ಪಾರ್ಲರ್ ಗಳ ಮೇಲೆ ಪೊಲೀಸರ ದಾಳಿಯಾದಾಗ ಬ್ಯೂಟಿ ಪಾರ್ಲರ್ ಮೇಲೆ ದಾಳಿ ಎಂದು ಹೇಳುತ್ತಾರೆ ಇದು ಬೇಸರದ ಸಂಗತಿ ಎಂದು ವಿಷಾಧಿಸಿದರು.

ಮೈಸೂರಿನಲ್ಲಿ ಇತ್ತೀಚೆಗೆ ಮಸಾಜ್ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಪೊಲೀಸರು ದಾಳಿ ನಡೆಸಿದ್ದರು. ಆದರೆ ಎಲ್ಲಾ ಕಡೆಗಳಲ್ಲೂ ಬ್ಯೂಟಿಪಾರ್ಲರ್ ಮೇಲೆ ದಾಳಿ ಮಾಡಲಾಗಿದೆ ಎಂದು ಬಿಂಬಿಸಲಾಗುತ್ತಿದ್ದು, ಇದು ತಪ್ಪು. ಇದರಿಂದ ಪ್ರತಿ ಬಾರಿ ಈ ರೀತಿ ದಾಳಿಗಳು ಆದಾಗ ಬ್ಯೂಟಿ ಪಾರ್ಲರ್ ಗಳಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು ಬೇಸರಿಸಿದರು.

ಸುದ್ದಿಗೋಷ್ಟಿಯಲ್ಲಿ ಅಸೋಸಿಯೇಷನ್ ನ ಎಂ.ಎ.ಸಬೀನಾ, ಪ್ರತಿಭಾ ಶೆಟ್ಟಿ, ಮಂಜುಳಾ, ಮಾಲಿನಿ ಮತ್ತು ಸ್ವಪ್ನ ಉಪಸ್ಥಿತರಿದ್ದರು.