ಮನೆ ಕಾನೂನು ಪತ್ನಿಯ ಗಮನಕ್ಕೆ ಬಾರದೇ ಅಕೆ ಸಹಿ ಮಾಡಿದ್ದ ಚೆಕ್  ನಿಂದ ಸಾಲ ಪಡೆಯುವುದು ಮಾನಸಿಕ ಕ್ರೌರ್ಯ:...

ಪತ್ನಿಯ ಗಮನಕ್ಕೆ ಬಾರದೇ ಅಕೆ ಸಹಿ ಮಾಡಿದ್ದ ಚೆಕ್  ನಿಂದ ಸಾಲ ಪಡೆಯುವುದು ಮಾನಸಿಕ ಕ್ರೌರ್ಯ: ಹೈಕೋರ್ಟ್

0

ಬೆಂಗಳೂರು: ಪತ್ನಿ ಸಹಿ ಮಾಡಿದ್ದ ಬ್ಲ್ಯಾಂಕ್ ಚೆಕ್ ​​ಗಳನ್ನು ಆಕೆಯ ಗಮನಕ್ಕೆ ಬಾರದಂತೆ ಸಾಲ ಪಡೆಯಲು ಪತಿ ಬಳಕೆ ಮಾಡುಕೊಳ್ಳುವುದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟು, ದಂಪತಿಗೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿದ್ದ ವಿಚ್ಛೇದನ ಎತ್ತಿಹಿಡಿದಿದೆ.

ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಂಡ್ಯ ಜಿಲ್ಲೆಯ ಹೊನಗಾನಹಳ್ಳಿಯ ರಾಮಕೃಷ್ಣ (ಹೆಸರು ಬದಲಿಸಲಾಗಿದೆ) ಎಂಬುವರು ಸಲ್ಲಿಸಿದ್ದ ಅರ್ಜಿವಿಚಾರಣೆ ನಡೆಸಿದನ್ಯಾಯಮೂರ್ತಿ ಜಿ. ನರೇಂದ್ರ ಮತ್ತು ನ್ಯಾಯಮೂರ್ತಿ ವಿಜಯ್ ಕುಮಾರ್ ಎ.ಪಾಟೀಲ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೆ, ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಪ್ರಸ್ತುತ ಪ್ರಕರಣದಲ್ಲಿ ಪತ್ನಿಗೆ ಪತಿ ಮಾನಸಿಕ ಹಿಂಸೆ ನೀಡಿರುವುದನ್ನು ಮಾತ್ರ ನಿರಾಕರಿಸಿದ್ದಾರೆ. ಆದರೆ, ಪತ್ನಿಯ ಸಹಿ ಮಾಡಿದ ಚೆಕ್‌ ಗಳನ್ನು ದುರ್ಬಳಕೆ ಮಾಡಿಕೊಂಡಿರುವ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬೆಳವಣಿಗೆ ಪತ್ನಿಗೆ ತೊಂದರೆ ನೀಡಿರುವುದನ್ನು ಸ್ಪಷ್ಟಪಡಿಸುತ್ತದೆ. ಅಲ್ಲದೆ, ಚೆಕ್ ​ಗಳನ್ನು ಪಡೆದು ಸಾಲ ನೀಡಿರುವವರು ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರಿಂದ ಮಹಿಳೆ ಪ್ರಕರಣ ಎದುರಿಸುವಂತಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಜೊತೆಗೆ, ಪತಿಯ ನಡತೆಯಿಂದ ಪತ್ನಿ ಅವಮಾನ ಮತ್ತು ಮಾನಸಿಕ ಕ್ರೌರ್ಯವನ್ನು ಅನುಭವಿಸಿದ್ದಾರೆ. ಈ ಅಂಶವನ್ನು ಕೌಟುಂಬಿಕ ನ್ಯಾಯಾಲಯ ಕೂಲಂಕುಷವಾಗಿ ಪರಿಶೀಲಿಸಿ ನಿರ್ಧಾರವನ್ನು ಪ್ರಕಟಿಸಿದೆ ಎಂದು ತನ್ನ ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.

ಕೌಟುಂಬಿಕ ನ್ಯಾಯಾಲಯ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ನ್ಯಾಯಸಮ್ಮತ ಆದೇಶ ನೀಡಿದೆ. ಈ ಆದೇಶದಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ ಎಂದು ನ್ಯಾಯ ಪೀಠ ತಿಳಿಸಿ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು ?

ಮಂಡ್ಯದ ರಾಮಕೃಷ್ಣ ಮತ್ತು ಮೈಸೂರಿನ ರುಕ್ಮಿಣಿ (ಇಬ್ಬರ ಹೆಸರುಗಳನ್ನು ಬದಲಿಸಲಾಗಿದೆ) 2003ರಲ್ಲಿ ವಿವಾಹವಾಗಿದ್ದರು. ದಂಪತಿ 2012ರ ವರೆಗೂ ಒಟ್ಟಿಗೆ ವಾಸವಿದ್ದರು. ಆದರೆ, ಪತಿ ರಾಮಕೃಷ್ಣ ಜೂಜು, ಕುಡಿತದ ಚಟ ಹೊಂದಿದ್ದರು. ಹಣಕಾಸಿನ ತೊಂದರೆಯಿಂದ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದರಿಂದಾಗಿ ಪತ್ನಿ ಆಗಾಗ ಪೋಷಕರಿಂದ ಹಣ ಪಡೆದು ನೀಡುತ್ತಿದ್ದರು. ಈ ನಡುವೆ ಪತ್ನಿಯ ಸಹಿ ಇರುವ ಖಾಲಿ ಚೆಕ್‌ಗಳನ್ನು ದುರ್ಬಳಕೆ ಮಾಡಿಕೊಂಡು ಪತಿ 20 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ನಂತರ ಸಾಲ ತೀರಿಸಲು ಪತ್ನಿ ತನ್ನ ಆಸ್ತಿಯನ್ನು ಮಾರಿ ಪತಿಗೆ 10.5 ಲಕ್ಷ ರೂ. ಪಾವತಿಸಿದ್ದರು. ಅಲ್ಲದೆ, ಕೆಲವು ಖಾಸಗಿ ವ್ಯಕ್ತಿಗಳು, ಸಹಿ ಚೆಕ್‌ ಗಳನ್ನು ನೀಡಿ ಪತಿ ಪಡೆದ ಸಾಲವನ್ನು ಮರುಪಾವತಿಸಲು ಒತ್ತಾಯಿಸಿದರು.

ಈ ಸಂಬಂಧ ಪ್ರಕರಣವೂ ದಾಖಲಾಗಿತ್ತು. ಗಂಡ ಮಾಡಿದ ಸಾಲ ತೀರಿಸಲು ಪತ್ನಿ ಸುಮಾರು 28 ಲಕ್ಷ ರೂ.ಗಳನ್ನು ನೀಡಿದ್ದರು. ಇದರಿಂದ ಬೇಸತ್ತಿದ್ದ ಪತ್ನಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು.ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ಮಹಿಳೆ ಕ್ರೌರ್ಯಕ್ಕೆ ಒಳಗಾಗಿದ್ದಾಳೆ ಎಂದು ಅಭಿಪ್ರಾಯಪಟ್ಟು, ವಿಚ್ಛೇದನ ಮಂಜೂರು ಮಾಡಿತ್ತು. ಈ ಆದೇಶ ಪ್ರಶ್ನಿಸಿ ಪತಿ ರಾಮಕೃಷ್ಣ ಹೈಕೋರ್ಟ್ ​​ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಇದೀಗ ಅರ್ಜಿ ವಜಾಗೊಳಿಸಿ ಆದೇಶಿಸಿದೆ.