ಮನೆ ರಾಜ್ಯ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಚಾಲನೆ

‘ನನ್ನ ಮಣ್ಣು ನನ್ನ ದೇಶ’ ಅಭಿಯಾನಕ್ಕೆ ಚಾಲನೆ

0

ಮೈಸೂರು:ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯ ಮೇರೆಗೆ ಹಮ್ಮಿಕೊಳ್ಳಲಾಗಿರುವ ‘ನನ್ನ ಮಣ್ಣು– ನನ್ನ ದೇಶ’ ಅಭಿಯಾನಕ್ಕೆ ಬಿಜೆಪಿ ನಗರ ಘಟಕದಿಂದ ಶನಿವಾರ ಚಾಲನೆ ನೀಡಲಾಯಿತು.
ನಗರದ ಅಂಬಾವಿಲಾಸ ಅರಮನೆಯ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪದಲ್ಲಿ ಮಣ್ಣನ್ನು ಕಳಶದಲ್ಲಿ ಸಂಗ್ರಹಿಸಿ ಪೂಜೆ ನೆರವೇರಿಸಲಾಯಿತು.
ನಂತರ ಮಾತನಾಡಿದ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ, ‘ದೇಶದ ಐತಿಹಾಸಿಕ ಸ್ಥಳಗಳಿಂದ ಮಣ್ಣು ಸಂಗ್ರಹಿಸಿ ದೆಹಲಿಯಲ್ಲಿ ನಿರ್ಮಿಸಲಾಗುತ್ತಿರುವ ಶೌರ್ಯ–ಸ್ಥೈರ್ಯದ ಪ್ರತಿಕವಾದ ‘ಅಮೃತ ವನ’ಕ್ಕೆ ಹಾಕಲಾಗುವುದು. ಸೆ. 11ರಿಂದ ನಗರದ ಎಲ್ಲ ಮತಗಟ್ಟೆಗಳ ವ್ಯಾಪ್ತಿಯ ಪ್ರಖ್ಯಾತ ದೇವಸ್ಥಾನ, ಸೈನಿಕರ ಮನೆ, ಹುತಾತ್ಮ ಸೈನಿಕರು ಹಾಗೂ ಪೊಲೀಸರ ಮನೆ ಮತ್ತು ಸಮಾಜಮುಖಿ‌ ಕೆಲಸ ಮಾಡಿದವರ ಮನೆಗಳ ಬಳಿಯಿಂದ ಹಿಡಿ ಮಣ್ಣು ಸಂಗ್ರಹಿಸಿ ಪಕ್ಷದ ಬೆಂಗಳೂರು ಕಚೇರಿಗೆ ರವಾನಿಸಲಾಗುವುದು’ ಎಂದು ತಿಳಿಸಿದರು.
ಕರ್ತವ್ಯ ಪಥದಲ್ಲಿ ಅಮೃತ ಉದ್ಯಾನ ನಿರ್ಮಿಸಲಾಗುತ್ತಿದ್ದು, ಅಲ್ಲಿ ದೇಶದಾದ್ಯಂತ ತಂದ ಮಣ್ಣನ್ನು ಹಾಕಲಾಗುತ್ತದೆ. ಸೈನಿಕರು ಹಾಗೂ ಹುತಾತ್ಮರಿಗೆ ಈ‌ ಮೂಲಕ ಗೌರವ ಸಲ್ಲಿಸಲಾಗುತ್ತಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ದೇಶದ ಜನರಲ್ಲಿ ರಾಷ್ಟ್ರೀಯ ಭಾವನೆಯನ್ನು ಉದ್ದೀಪಿಸುವ ಕೆಲಸವನ್ನು ಈ ಮೂಲಕ ಮಾಡಲಾಗುತ್ತಿದೆ. ದೇಶಕ್ಕಾಗಿ ದುಡಿದವರು ಮತ್ತು ಮಡಿದವರನ್ನು ಸ್ಮರಿಸುವ ಕಾರ್ಯಕ್ರಮ ಇದಾಗಿದೆ’ ಎಂದರು.
‘ನಗರದಾದ್ಯಂತ ಸಂಗ್ರಹಿಸಿದ ಮಣ್ಣಿಗೆ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಹಾಗೂ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮೊದಲಾದವರಿಂದ ಪೂಜೆ ಮಾಡಿಸಿ, ಬೆಂಗಳೂರಿಗೆ ಕಳುಹಿಸಿಕೊಡಲಾಗುವುದು’ ಎಂದು ಹೇಳಿದರು.
ಬಿಜೆಪಿ ನಗರ ಘಟಕದ ಕಾರ್ಯಾಧ್ಯಕ್ಷ ಗಿರಿಧರ್, ಮುಖಂಡರಾದ ಸೋಮಶೇಖರ್, ಜೋಗಿ ಮಂಜು, ಗೋಕುಲ್ ಗೋವರ್ಧನ್ ಪಾಲ್ಗೊಂಡಿದ್ದರು’