ಮನೆ ಶಿಕ್ಷಣ ಶೈಕ್ಷಣಿಕ ಸಾಲಿನಲ್ಲಿ ಏಕರೂಪ ಶಿಕ್ಷಣ ಜಾರಿಗೊಳಿಸಲು ಶಿಕ್ಷಣ ಇಲಾಖೆ ಆದೇಶ

ಶೈಕ್ಷಣಿಕ ಸಾಲಿನಲ್ಲಿ ಏಕರೂಪ ಶಿಕ್ಷಣ ಜಾರಿಗೊಳಿಸಲು ಶಿಕ್ಷಣ ಇಲಾಖೆ ಆದೇಶ

0

ಬೆಂಗಳೂರು (Bengaluru)-ಶೈಕ್ಷಣಿಕ ವರ್ಷವನ್ನು ಮೇ 16ರಿಂದ ಪ್ರಾರಂಭಿಸಲು‌ ಮುಂದಾಗಿರುವ ಶಿಕ್ಷಣ ಇಲಾಖೆ ಏಕರೂಪ ಶಿಕ್ಷಣ ಜಾರಿಗೊಳಿಸಲು ಆದೇಶ ಹೊರಡಿಸಿದೆ.
ರಾಜ್ಯಪಠ್ಯಕ್ರಮ ಅನುಸರಿಸುತ್ತಿರುವ ರಾಜ್ಯದ ಎಲ್ಲ ಸರ್ಕಾರಿ ಅನುದಾನಿತ, ಅನುದಾನ ರಹಿತ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಏಕ ರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೊಳಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಶೈಕ್ಷಣಿಕ ವರ್ಷದ ಪೂರ್ಣಾವಧಿಯಲ್ಲಿ ಪಠ್ಯ ವಸ್ತುವಿನ ಬೋಧನೆಗೆ ಸಹಕಾರಿಯಾಗುವಂತೆ ಆಯೋಜಿಸಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವ ಮೂಲಕ ಕಲಿಕಾ ಚೇತರಿಕೆ ವರ್ಷವೆಂದು ಕಾರ್ಯಸೂಚಿಯನ್ನು ರೂಪಿಸಲಾಗಿದೆ.
ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಮಕ್ಕಳ ಶಾಲಾ ದಾಖಲಾತಿಯನ್ನು ಮೇ 16 ರಿಂದ ಆರಂಭಿಸಿ ಜುಲೈ 31ರೊಳಗೆ ಮುಕ್ತಾಯಗೊಳಿಸಲು ಸೂಚಿಸಿದೆ. ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳ ಕಲಿಕಾ ನಿರಂತರತೆಗೆ ಅಡ್ಡಿಯಾಗಿದ್ದು, 2021-22ನೇ ಶೈಕ್ಷಣಿಕ ಸಾಲಿನಲ್ಲಿ ಶೇ.50ರಿಂದ ಶೇ.60ರಷ್ಟು ದಿನಗಳು ಮಾತ್ರ ಭೌತಿಕವಾಗಿ ಶಾಲೆಗಳ ನಿರ್ವಹಣೆ ಮಾಡಲಾಗಿದೆ.
ಭೌತಿಕ ತರಗತಿಗಳು ನಡೆಯದ ಅವಧಿಯಲ್ಲಿ ಆನ್‍ಲೈನ್ ಸೇರಿದಂತೆ ಪರ್ಯಾಯ ವಿಧಾನಗಳ ಮೂಲಕ ಬೋಧನೆ ಮಾಡಿದರೂ ನಿರೀಕ್ಷಿತ ಮಟ್ಟದ ಕಲಿಕಾ ಪ್ರಗತಿ ಉಂಟಾಗಿಲ್ಲ. ಇದನ್ನು ಮನಗಂಡು ಕಲಿಕಾ ಹಿನ್ನಡೆ ಅಥವಾ ಕಲಿಕಾ ಕೊರತೆಯನ್ನು ಸರಿದೂಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಶೈಕ್ಷಣಿಕ ವರ್ಷದ ಪೂರ್ಣಾವಯಲ್ಲಿ ಪಠ್ಯವಸ್ತುವಿನ ಬೋಧನೆಗೆ ಹಿನ್ನಡೆಯಾಗದಂತೆ ಆಯೋಜಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಸಮಗ್ರ ನಿರ್ವಹಣೆಗೆ ಸಹಕಾರಿಯಾಗುವಂತೆ ವಾರ್ಷಿಕ ಕಾರ್ಯಸೂಚಿಯನ್ನು ಸಿದ್ಧಪಡಿಸಿ ಎಲ್ಲ ಶಾಲೆಗಳಲ್ಲೂ ಅನುಷ್ಠಾನಗೊಳಿಸಲು ಸೂಚಿಸಿದೆ. ಜತೆಗೆ ಶೈಕ್ಷಣಿಕ ವರ್ಷದ ಪ್ರಾರಂಭ ಮತ್ತು ಕಲಿಕಾ ಪೂರಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸೂಚಿಸಿದೆ.
ಮೊದಲ ಅವಧಿಯ ಶಾಲಾ ಕರ್ತವ್ಯದ ದಿನಗಳನ್ನು ಮೇ 16 ರಿಂದ ಅಕ್ಟೋಬರ್ 2ರ ವರೆಗೆ ಹಾಗೂ ಎರಡನೆ ಅವಧಿಯ ಶಾಲಾ ಕರ್ತವ್ಯದ ದಿನಗಳನ್ನು ಅಕ್ಟೋಬರ್ 17 ರಿಂದ 2023ರ ಏಪ್ರಿಲ್ 10ರ ವರೆಗೆ ನಿಗದಿಪಡಿಸಲಾಗಿದೆ. ದಸರಾ ರಜೆಯನ್ನು ಅಕ್ಟೋಬರ್ 3 ರಿಂದ ಅಕ್ಟೋಬರ್ 16ರ ವರೆಗೆ, ಬೇಸಿಗೆ ರಜೆಯನ್ನು 2023ರ ಏಪ್ರಿಲ್ 11 ರಿಂದ ಮೇ 28ರ ವರೆಗೆ ನಿಗದಿಪಡಿಸಲಾಗಿದೆ.
ಶೈಕ್ಷಣಿಕ ಸಾಲಿನಲ್ಲಿ ಲಭ್ಯವಾಗುವ 330 ದಿನಗಳಲ್ಲಿ 60 ದಿನಗಳು ಸರ್ಕಾರಿ ರಜಾ ದಿನಗಳಾಗಿವೆ. ಶಾಲಾ ಕರ್ತವ್ಯಕ್ಕೆ 270 ದಿನಗಳು ಲಭ್ಯವಿದ್ದು, ಅದರಲ್ಲಿ ನಾಲ್ಕು ದಿನ ಸ್ಥಳೀಯ ವಿವೇಚನಾ ರಜೆಗಳು ಸೇರಿವೆ. ದಸರಾ ರಜೆ ಹಾಗೂ ಇತರೆ ಸರ್ಕಾರಿ ರಜೆ ಸೇರಿ 10 ದಿನಗಳು ಒಳಗೊಂಡಿದ್ದು, ಒಟ್ಟಾರೆ 256 ದಿನಗಳು ಶೈಕ್ಷಣಿಕ ಸಾಲಿನಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಲಭ್ಯವಾಗಲಿವೆ.
ಅನಿರೀಕ್ಷಿತ ಕಾರಣಗಳಿಂದ ಶಾಲೆಗೆ ರಜೆ ಘೋಷಣೆಯಾದಲ್ಲಿ ಆ ಅವಧಿಯ ಶಾಲಾ ಕರ್ತವ್ಯವನ್ನು ಮುಂದಿನ ರಜಾ ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಶಾಲೆ ನಡೆಸಬೇಕು ಎಂದು ಸೂಚಿಸಲಾಗಿದೆ.