ಮನೆ ಸ್ಥಳೀಯ ದಸರಾ ಉದ್ಘಾಟನೆ ನನಗೆ ಸಿಕ್ಕಿರುವುದು ಸಾಮಾಜಿಕ ಕಲಾ ನ್ಯಾಯ: ಹಂಸಲೇಖ

ದಸರಾ ಉದ್ಘಾಟನೆ ನನಗೆ ಸಿಕ್ಕಿರುವುದು ಸಾಮಾಜಿಕ ಕಲಾ ನ್ಯಾಯ: ಹಂಸಲೇಖ

0

ಮೈಸೂರು: ದಸರಾ ಉದ್ಘಾಟನೆ ನನಗೆ ಸಿಕ್ಕಿರುವುದು ಸಾಮಾಜಿಕ ಕಲಾ ನ್ಯಾಯ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.

ಮೈಸೂರಿನಲ್ಲಿ ನಡೆದ ಸಂವಾದವೊಂದರಲ್ಲಿ ಮಾತನಾಡಿದ ಅವರು, ಈ ಬಾರಿಯ ಮೈಸೂರು ದಸರಾ ಉದ್ಘಾಟಕರಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಕೆಲವರು ಕಾವ್ಯಕ್ಕೆ ಸಿಕ್ಕ ಗೌರವ ಅಂದರು. ಇನ್ನೂ ಕೆಲವರು ಸಾಮಾಜಿಕ ನ್ಯಾಯ ಅಂತ ಹೇಳಿದರು. ಆದರೆ ಅದ್ಯಾವುದನ್ನು ವ್ಯಾಖ್ಯಾನಿಸಲು ಕಷ್ಟ. ನಾನು ಸಿನಿಮಾ ಬರಹಗಾರ, ನನಗೆ ಕವಿ ಪಟ್ಟ ಬೇಡ ಅಂತ ಹೇಳುತ್ತೇನೆ. ಕವಿ ಪಟ್ಟ ತೆಗೆದುಕೊಂಡರೇ, ಮೇಲೆ, ಮಧ್ಯ, ಕೆಳಗೆ ಮೂರು ಭಾಗ ಮಾಡುತ್ತಾರೆ ಎಂದರು.

ಬರಗಾಲದ ನಡುವೆ ಅದ್ದೂರಿ‌ ದಸರಾ ಆಚರಣೆ ವಿಚಾರವಾಗಿ ಮಾತನಾಡಿದ ಅವರು, ರೈತರ ವಿಚಾರವನ್ನು ಗಮನಿಸಬೇಕು. ಹಬ್ಬದ ಮೂಲವೇ ರೈತ. ಅದರ ಬಗ್ಗೆ ನನ್ನ ಚಿಂತೆ ಜಾಸ್ತಿ ಇದೆ. ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹಾರ ಮಾಡಬೇಕು ಎಂಬುದು ನನ್ನ ಆಸೆ. ರೈತರ ಮನಸ್ಸಿಗೆ ನೋವಾಗುವದು ಬೇಡ ಅನ್ನುವುದು ನನ್ನ ಭಾವನೆ. ಸ್ಮಾರ್ಟ್ ಸಿಟಿಗಿಂತ ಸ್ಮಾರ್ಟ್ ವಿಲೇಜ್ ಆಗಬೇಕಿದೆ. ಕೃಷಿ ತಜ್ಞರು ಸಹಾಯದಿಂದ ಸ್ಮಾರ್ಟ್ ವಿಲೇಜ್ ಮಾಡಬೇಕಿದೆ ಎಂದು ಕರೆಕೊಟ್ಟರು.

ನನಗೆ ಕನ್ನಡ ಒಂದಂಶ ಆಗಬೇಕು. ಕನ್ನಡದ ಅಸ್ಮಿತೆ ಕಾಪಾಡುವ ಕೆಲಸವಾಬೇಕು. ಕನ್ನಡಕ್ಕಾಗಿ ಕಾವಲಿಡಿ. ಕನ್ನಡವನ್ನು ರಕ್ಷಿಸಬೇಕು. ಹಿಂದಿ ಹೇರಿಕೆ‌ ಇಂದಿನಿಂದ ಅಲ್ಲ ನಾನು ಎಂಟನೇ ತರಗತಿಯಿಂದ ಇದೆ. ದೆಹಲಿಗೆ ಕನ್ನಡ ಬೇಕಾಗಿಲ್ಲ ನಮಗೆ ಹಿಂದಿ ಬೇಕಾಗಿಲ್ಲ. ಆದರೆ ನಮಗೆ ದೆಹಲಿ ಬೇಕಾಗಿದೆ. ಹಿಂದಿ ಹೇರುವ ಹುನ್ನಾರ, ಹಿಂದಿನ ಕಾಲದಿಂದಲು ಕೂಡ ಇದೆ. ಈಗ ಅದು ಜಾಸ್ತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಶಾಲೆ ಮುಚ್ಚುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು, ತಾಯಿ ಮಕ್ಕಳಿಗೆ ಕನ್ನಡದ ಬಗ್ಗೆ ಹೇಳಿಕೊಡಬೇಕು. ಮಕ್ಕಳು ಇಂಗ್ಲಿಷ್​​ ನಲ್ಲೇ ಓದಬೇಕೆಂಬ ಆಸೆ ಪೊಷಕರು ವ್ಯಕ್ತಪಡಿಸುತ್ತಿದ್ದಾರೆ. ಇಂಗ್ಲಿಷ್ ಇದ್ದರೆ ಮಾತ್ರ ಕೆಲಸ ಸಿಗುವುದು ಎಂಬ ಭಾವನೆ ಜನರಲ್ಲಿ ಪೋಷಕರಲ್ಲಿ ಮೂಡಿದೆ. ಹಾಗಾಗಿ ಮನೆಯಲ್ಲಿ ಇಂಗ್ಲಿಷ್ ಕಲಿಸುವ ಹಂತಕ್ಕೆ ಪೋಷಕರು ಹೋಗಿದ್ದಾರೆ. ಇಂಗ್ಲಿಷ್ ಕೆಲಸಕ್ಕೆ ಇಟ್ಟುಕೊಳ್ಳಿ ಕನ್ನಡದ ಅಸ್ಮಿತೆ ಉಳಿಸಲು ಕಲಿಯಿರಿ. ಶಾಲೆಯಿಂದ ಮಾತ್ರವಲ್ಲ, ಮನೆಯಿಂದಲೇ ಕನ್ನಡ ಕಲಿಕೆ‌ ಆಗಬೇಕು. ಈ ವೇಳೆ‌ ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಆಗುತ್ತೆ ಎಂದು ಕರೆ ಕೊಟ್ಟರು.