ಆಸಿಡ್ ದಾಳಿಯ ಸಂತ್ರಸ್ತರಿಗೆ ಹಳೆಯ ಪರಿಹಾರ ಯೋಜನೆಯನ್ನೇ ಚಾಲ್ತಿಯಲ್ಲಿಟ್ಟಿರುವ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರವನ್ನು ಟೀಕಿಸಿರುವ ಕಲ್ಕತ್ತಾ ಹೈಕೋರ್ಟ್ ರಾಜ್ಯ ತನ್ನ ‘ಪ್ರಗತಿಪರ ಸ್ತ್ರೀವಾದಿ ಬೇರುಗಳನ್ನು ಮರೆತಿದೆ ಎಂದಿದೆ.
ಪಶ್ಚಿಮ ಬಂಗಾಳ ಇಂದು ಏನು ಯೋಚಿಸುತ್ತದೋ ಅದನ್ನು ಭಾರತ ನಾಳೆ ಯೋಚಿಸುತ್ತದೆ ಎಂದು ಗೋಪಾಲ ಕೃಷ್ಣ ಗೋಖಲೆ ಅವರು ಹೇಳಿದ್ದ ಮಾತು ಈಗ ಅಪ್ರಸ್ತುತವಾಗಿದೆ ಎಂದು ಸೆಪ್ಟೆಂಬರ್ 8ರಂದು ನೀಡಿದ ತೀರ್ಪಿನಲ್ಲಿ, ನ್ಯಾಯಮೂರ್ತಿ ಶೇಖರ್ ಸರಾಫ್ ಉಲ್ಲೇಖಿಸಿದ್ದಾರೆ.
“ಈ ಮಾತು (ಗೋಖಲೆ ಅವರ ಹೇಳಿಕೆ) 1900ರ ದಶಕದ ಆರಂಭದಲ್ಲಿ ತುಂಬಾ ಪ್ರಸ್ತುತವಾಗಿತ್ತು; ಆದರೆ, ಪರಿಸ್ಥಿತಿ ಇಂದು ವಿರೋಧಾಭಾಸದಿಂದ ಕೂಡಿದೆ. ಪ್ರಗತಿ ಮತ್ತು ಆಡಳಿತಕ್ಕೆ ಸಂಬಂಧಿಸಿದ ಬಹುತೇಕ ಕ್ಷೇತ್ರಗಳಲ್ಲಿ ಮತ್ತು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿರುವ ಉತ್ತಮ ಕ್ರಮಗಳನ್ನು ಪಾಲಿಸುವಲ್ಲಿ ಪಶ್ಚಿಮ ಬಂಗಾಳ ರಾಜ್ಯ ಹಿಂದುಳಿದಿದೆ. ಬೇಗಂ ರೋಕೆಯಾ, ಸಖಾವತ್ ಹೊಸೈನ್, ಸರೋಜಿನಿ ನಾಯ್ಡು ಚಟ್ಟೋಪಾಧ್ಯಾಯ ಇನ್ನಿತರ ಅನೇಕ ಮಹಿಳೆಯರ ಪ್ರಗತಿಪರ ಸ್ತ್ರೀವಾದಿ ಆಲೋಚನೆಗಳಿಗೆ ಹೆಸರಾಗಿದ್ದ ರಾಜ್ಯ, ತನ್ನ ಸ್ತ್ರೀವಾದಿ ಬೇರುಗಳನ್ನು ಮರೆತಿರುವುದು ದುರದೃಷ್ಟಕರ”ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಹೀಗಾಗಿ, ಬಂಗಾಳದ ಸಮೃದ್ಧ ಸ್ತ್ರೀವಾದಿ ಇತಿಹಾಸವನ್ನು ಗಮನಿಸಬೇಕು ಮತ್ತು ಗೋಖಲೆ ಅವರ ಮಾತು ಮತ್ತೊಮ್ಮೆ ಪ್ರಸ್ತುತವಾಗುವಂತೆ ನೋಡಿಕೊಳ್ಳಬೇಕು ಎಂದು ಅದು ರಾಜ್ಯ ಸರ್ಕಾರಕ್ಕೆ ತಿಳಿಹೇಳಿತು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (ಎನ್ ಎಎಲ್ ಎಸ್ ಎ- ನಾಲ್ಸಾ) 2018ರಲ್ಲಿ ರೂಪಿಸಿದ್ದ ಯೋಜನೆಯಂತೆ ರಾಜ್ಯ ಸರ್ಕಾರ ಪರಿಹಾರ ಒದಗಿಸಬೇಕು ಎಂದು ಕೋರಿ ಆಸಿಡ್ ದಾಳಿ ಸಂತ್ರಸ್ತರು ಸಲ್ಲಿಸಿದ್ದ ಅರ್ಜಿಯ ತೀರ್ಪಿನ ವೇಳೆ ನ್ಯಾಯಾಲಯ ಈ ಅವಲೋಕನ ಮಾಡಿದೆ.
ನಾಲ್ಸಾ ರೂಪಿಸಿರುವ ಪರಿಹಾರದ ಅನ್ವಯ ಆಸಿಡ್ ದಾಳಿ ಸಂತ್ರಸ್ತೆಯರಿಗೆ ಕನಿಷ್ಠ ₹7 ಲಕ್ಷ, ಗರಿಷ್ಠ ₹8 ಲಕ್ಷ ಪರಿಹಾರ ಕಡ್ಡಾಯವಾಗಿದೆ. ಒಂದೊಮ್ಮೆ ಸಂತ್ರಸ್ತೆಯು ಅಪ್ರಾಪ್ತೆಯಾಗಿದ್ದರೆ ಕನಿಷ್ಠ ಪರಿಹಾರದ ಶೇ.50ರಷ್ಟು ಹೆಚ್ಚುವರಿ ಪರಿಹಾರವನ್ನು ನೀಡುವ ಅವಕಾಶವನ್ನು ಅದು ಒದಗಿಸುತ್ತದೆ.
ಸುಪ್ರೀಂ ಕೋರ್ಟ್ ನ ತೀರ್ಪಿಗೆ ಅನುಗುಣವಾಗಿ ತಕ್ಷಣವೇ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಬೇಕು. ಎಂಟು ವಾರಗಳ ಒಳಗೆ ನಾಲ್ಸಾ ಪರಿಹಾರ ಯೋಜನೆ ಮಾದರಿಯ ಯೋಜನೆಯೊಂದನ್ನು ರೂಪಿಸಬೇಕು ಎಂದು ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.