ಅಹಮದಾಬಾದ್: ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿ ಅಹಮದಾಬಾದ್ ನಲ್ಲಿ ನೆಲೆಸಿರುವ ನೂರಕ್ಕೂ ಹೆಚ್ಚು ಹಿಂದೂ ನಿರಾಶ್ರಿತರಿಗೆ ಮಂಗಳವಾರ ಪೌರತ್ವ ಪ್ರಮಾಣ ಪತ್ರವನ್ನು ವಿತರಿಸಲಾಗಿದೆ.
ಗುಜರಾತ್ ನ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಅವರು 108 ನಿರಾಶ್ರಿತರಿಗೆ ಪೌರತ್ವ ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಸ್ತಾಂತರಿಸಿದರು ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬಂದ ನಿರಾಶ್ರಿತರು, ತಮ್ಮ ಪೌರತ್ವ ಅರ್ಜಿಗಳ ತ್ವರಿತ ಪ್ರಕ್ರಿಯೆಗಾಗಿ ಸಂಘವಿ ಮತ್ತು ಜಿಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು ಎಂದು ಹೇಳಿದ್ದಾರೆ.
ಸಾಂಘವಿ ಅವರು ಭಾರತೀಯ ಪ್ರಜೆಗಳಾಗಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು ಮತ್ತು “ಹೊಸ ಭಾರತವನ್ನು ನಿರ್ಮಿಸಲು” ತಮ್ಮನ್ನು ತಾವು ಬದ್ಧರಾಗುವಂತೆ ಸಲಹೆ ನೀಡಿದ್ದಾರೆ.
ನಿರಾಶ್ರಿತರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಲು ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಎರಡೂ ಬದ್ಧವಾಗಿವೆ ಎಂದು ಸಚಿವರು ಹೇಳಿದರು.
ಅಹಮದಾಬಾದ್ ಜಿಲ್ಲಾಧಿಕಾರಿ ಕಚೇರಿಯಿಂದ ಇಲ್ಲಿಯವರೆಗೆ 1,149 ಪಾಕಿಸ್ತಾನಿ ಹಿಂದೂಗಳಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಸಚಿವರು ಹೇಳಿದರು.
2016 ಮತ್ತು 2018 ರ ಗೆಜೆಟ್ ಅಧಿಸೂಚನೆಗಳು ಗುಜರಾತ್ ನ ಅಹಮದಾಬಾದ್, ಗಾಂಧಿನಗರ ಮತ್ತು ಕಚ್‌ನ ಜಿಲ್ಲಾಧಿಕಾರಿಗಳಿಗೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಭಾರತೀಯ ಪೌರತ್ವವನ್ನು ನೀಡಲು ಅಧಿಕಾರ ನೀಡಿವೆ ಎಂದು ಪ್ರಕಟಣೆ ತಿಳಿಸಿದೆ.