ಮನೆ ಸುದ್ದಿ ಜಾಲ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ

0

ಬೆಂಗಳೂರು(Bengaluru): ಇಂದಿನಿಂದ ಮೇ 18ರ ವರೆಗೆ ದ್ವಿತೀಯ ಪಿಯುಸಿ(2nd PUC) ಪರೀಕ್ಷೆ(Exam) ನಡೆಯಲಿದ್ದು, ರಾಜ್ಯದ ಒಟ್ಟು 1,076 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 6,84,255 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ.

ಈ ಬಾರಿ ಪರೀಕ್ಷೆಗೆ 5241 ಕಾಲೇಜುಗಳಿಂದ 6,84,255 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ಒಟ್ಟು 1076 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿವೆ. ಮುಖ್ಯ ಅಧೀಕ್ಷಕರನ್ನು ಬಿಟ್ಟು ಉಳಿದ ಸಿಬ್ಬಂದಿ-ವಿದ್ಯಾರ್ಥಿಗಳಿಗೆ ಮೊಬೈಲ್ ನಿಷೇಧಿಸಲಾಗಿದೆ.

ಎಸ್ಎಸ್ಎಲ್’ಸಿ ಪರೀಕ್ಷೆಯಂತೆಯೇ ಪಿಯು ಪರೀಕ್ಷೆಗೂ ಯಾವುದೇ ಧರ್ಮ ಸೂಚಕ ಉಡುಪು ಧರಿಸುವುದನ್ನು ಸರ್ಕಾರ ಈಗಾಗಲೇ ನಿಷೇಧಿಸಿದ್ದು, ಅದರಂತೆ ತಮ್ಮ ಕಾಲೇಜಿನಲ್ಲಿ ನಿಗದಿಪಡಿಸಿದ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸಬೇಕಿದೆ. ಸಮವಸ್ತ್ರ ಇಲ್ಲದಿದ್ದಲ್ಲಿ ಯಾವುದೇ ಧರ್ಮ ಸೂಚಕವಲ್ಲದ ಉಡುಪು ಧರಿಸಿ ಹಾಜರಾಗಲು ಸೂಚಿಸಿದೆ.

ಪರೀಕ್ಷಾ ಅಕ್ರಮಗಳ ಮೇಲೆ ನಿಗಾವಹಿಸಲು 2900ಕ್ಕೂ ಹೆಚ್ಚು ಜಿಲ್ಲಾ, ತಾಲ್ಲೂಕು ಮತ್ತು ವಿಶೇಷ ಜಾಗೃತ ದಳ ರಚಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.