ಮೈಸೂರು(Mysuru): ಗೃಹಮಂತ್ರಿ ಖಾತೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ ಎಂದು ಕೃಷಿ ಇಲಾಖೆ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನಗರದ ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರಗ ಜ್ಞಾನೇಂದ್ರ ಅವರು ಗೃಹಖಾತೆ ನಿಭಾಯಿಸುತ್ತಿದ್ದಾರೆ. ಅವರ ಕೆಲಸ ವಿಚಾರವಾಗಿ ಮೊಸರಲ್ಲಿ ಕಲ್ಲು ಹುಡುಕುವುದು ಬೇಡ. ಒಂದು ಖಾತೆ ಬದಲಾವಣೆಯಾಗಿ, ನನಗೆ ಗೃಹಮಂತ್ರಿ ಖಾತೆ ಕೊಟ್ಟರೆ ನಿಭಾಯಿಸುವೆ ಎಂದರು.
ರಾಜ್ಯದಲ್ಲಿ ಬಿಜೆಪಿಯಿಂದ ಗಲಾಟೆ ಎಂಬ ಕಾಂಗ್ರೆಸ್ ಆರೋಪದ ವಿಚಾರವಾಗಿ ಮಾತನಾಡಿ, ಎಲ್ಲಿ ಗಲಾಭೆಯಾಗಿದೆ? ಹುಬ್ಬಳ್ಳಿಯಲ್ಲಿ ಪೊಲೀಸರು ಗಲಾಭೆಯನ್ನ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರ ಜೀವನ ಹಾಳಾಗುತ್ತಿದೆ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ರೈತರಿಗೆ ತೊಂದರೆಯಾಗಬಾರದು ಎಂದು ಕೇಂದ್ರ ಸರ್ಕಾರ 6 ಸಾವಿರ, ರಾಜ್ಯ ಸರ್ಕಾರ 4ಸಾವಿರ ಕೊಡುತ್ತಿದೆ. ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಇಂತಹ ಕೆಲಸ ಮಾಡಿದ್ದಾರಾ? ಸಿದ್ದರಾಮಯ್ಯ ಅವರಿಗೆ ಟೀಕೆ ಮಾಡುವುದೇ ಕೆಲಸವಾಗಿದೆ ಎಂದು ಹರಿಹಾಯ್ದರು.
ರೈತರಿಗೆ ಬಿತ್ತನೆ ಬೀಜದ ಕೊರತೆಯಾಗದಂತೆ ಕೃಷಿ ಇಲಾಖೆ ಕೆಲಸ ಮಾಡುತ್ತಿದೆ. ರಸಗೊಬ್ಬರ ನಕಲಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.